Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸಹಕಾರ ಸಂಘದಲ್ಲಿ ಅವಿಶ್ವಾಸ ನಿರ್ಣಯ

ಸಹಕಾರ ಸಂಸ್ಥೆಗಳು ಆರಂಭಗೊಂಡಿರುವುದೇ ಪ್ರಜಾತಂತ್ರದ ಆಶಯಕ್ಕೆ ಪೂರಕವಾಗಿ. ಸಹಕಾರ ಸಂಸ್ಥೆ ಒಂದು ಜನಸಮೂಹದ ಸ್ವಯಂ ಶಾಸನದ (ಸ್ವಾಯತ್ತ) ಸಂಸ್ಥೆ. ಆ ಸಮುದಾಯದ ಸಾಮಾನ್ಯ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಅವಶ್ಯಕತೆ ಹಾಗೂ ಅಗತ್ಯಗಳನ್ನು ಪ್ರಜಾಸತ್ತಾತ್ಮಕವಾಗಿ ಪೂರೈಸಿಕೊಳ್ಳಲು ಈ ವ್ಯವಸ್ಥೆ ರೂಪಿಸಿಕೊಳ್ಳಲಾಗಿದೆ.

ಸಹಕಾರ ಸಂಸ್ಥೆಯ ಮೌಲ್ಯವೆಂದರೆ ಸ್ವ-ಸಹಾಯ, ಸ್ವ-ಜವಾಬ್ದಾರಿ, ಪ್ರಜಾಸತ್ತೆ, ಸಮಾನತೆ, ಸರ್ವಸಮ್ಮತ ಹಾಗೂ ದೃಢತೆ. ಸಹಕಾರಿಗಳಲ್ಲಿ ನಂಬಿಕೆ, ಪ್ರಾಮಾಣಿಕತೆ, ಸಾಮಾಜಿಕ ಜವಾಬ್ದಾರಿ, ನೈತಿಕತೆಯ ಮುಕ್ತ ನಡವಳಿಕೆಗಳು ಮೌಲ್ಯಗಳ ರೀತಿಯಲ್ಲಿ ಬೇರೂರಿರಬೇಕು. ಹಾಗೂ ಆ ಮೌಲ್ಯಗಳನ್ನು ಇತರರಿಗೆ ಮುಟ್ಟಿಸುವ ಮನಸ್ಸೂ ಅವರಿಗಿರಬೇಕು.

ಸಹಕಾರ ಸಂಸ್ಥೆಯ ಕಲ್ಪನೆಯೇ ಒಂದು ಅದ್ಭುತ. ಒಬ್ಬರಿಗಾಗಿ ಎಲ್ಲರೂ. ಎಲ್ಲರಿಗಾಗಿ ಒಬ್ಬರು ದುಡಿಯುವ, ಸಹಕಾರ ನೀಡುವ, ಆ ಮೂಲಕ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಏಳ್ಗೆ ಸಾಧಿಸುವ ಉದಾತ್ತ ಆಶಯ ಇದರ ಹಿಂದಿದೆ.

ಈ ಆಶಯ ಈಡೇರುತ್ತಿದೆಯೇ?

ಇತ್ತೀಚಿನ ವರ್ಷಗಳಲ್ಲಿ ಸಹಕಾರ ವ್ಯವಸ್ಥೆಯ ಆಶಯಕ್ಕೆ ವಿರುದ್ಧವಾಗಿ ಸಹಕಾರಿಗಳು ನಡೆದುಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. ಸಹಕಾರ ಸಂಸ್ಥೆಗಳು ರಾಜಕೀಯ ಪ್ರವೇಶಿಸಲು ಮೆಟ್ಟಿಲುಗಳಾಗಿ ಪರಿವರ್ತನೆಗೊಂಡಿರುವುದು ದುರದೃಷ್ಟಕರ. ಸಣ್ಣ ಸಣ್ಣ ಸಹಕಾರ ಸಂಸ್ಥೆಗಳಲ್ಲಿಯೂ ಅಧಿಕಾರದ ದಾಹ ಹಾಗೂ ಪ್ರತಿಷ್ಠೆಯ ಪರಿಣಾಮದಿಂದ ಒಟ್ಟಾರೆ ಸಂಸ್ಥೆಯೇ ಇಕ್ಕಟ್ಟಿಗೆ ಸಿಲುಕುವ ಪ್ರಸಂಗಗಳು ಪದೇಪದೇ ಎದುರಾಗುತ್ತಿವೆ. ಇಂತಹ ಸಮಸ್ಯೆಗೆ ಪರಿಹಾರ ಒದಗಿಸಬೇಕಾದ ಸಹಕಾರ ಕಾಯಿದೆಯೂ ಸಹ ತನ್ನ ಲೋಪದಿಂದಾಗಿ ಅಸಹಾಯಕವಾಗಿದೆ. ಇದರಿಂದಾಗಿ ಕಾನೂನಾತ್ಮಕ ಸಮಸ್ಯೆಗಳು ಅಗಣಿತಗೊಂಡಿವೆ. ಸಹಕಾರ ಕಾನೂನು ತಿದ್ದುಪಡಿ ಮಾಡುವಾಗ ವಾಸ್ತವ ನೆಲೆಗಟ್ಟಿನಲ್ಲಿ ವಿಮರ್ಶೆ ಮಾಡಿ ತಿದ್ದುಪಡಿ ಮಾಡಬೇಕೇ ವಿನಃ ಕೇವಲ ಕಾಲ್ಪನಿಕ ವಿಚಾರಗಳ ಆಧಾರದಲ್ಲಿ ಅಲ್ಲ.

ಕಾಯ್ದೆಯಲ್ಲೇನು ಸಮಸ್ಯೆಯಿದೆ?

ಸಂವಿಧಾನಕ್ಕೆ ಭಾರತ ಸರ್ಕಾರ ತಂದಿರುವ 97ನೇ ತಿದ್ದುಪಡಿಯ ಅನ್ವಯ ಕರ್ನಾಟಕ ಸರ್ಕಾರ ಇಲ್ಲಿನ ಸಹಕಾರ ಕಾಯಿದೆ-1959ಕ್ಕೆ 2013ರಲ್ಲಿ ತಿದ್ದುಪಡಿ ಮಾಡಿದೆ. ಆದರೆ ಆ ತಿದ್ದುಪಡಿ ಸಂವಿಧಾನದ ಆಶಯಕ್ಕೆ ಪೂರಕವಾಗಿವುದಿಲ್ಲವೆಂಬುದು ನಿರ್ವಿವಾದ.

ಕರ್ನಾಟಕ ಸಹಕಾರ ಕಾಯಿದೆ ಹಾಗೂ ನಿಯಮಗಳಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳಲು ಚುನಾಯಿತ ಸದಸ್ಯರಿಗೆ ಅವಕಾಶ ಕಲ್ಲಿಸಿದೆ. ಅದರ ಪ್ರಕಾರ 5 ವರ್ಷದ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಅಥವಾ ಖಜಾಂಚಿ ಹು¨ªೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆದರೆ ಆಯ್ಕೆ ಮಾಡಿದ ಸದಸ್ಯರಿಗೆ ಪದಾಧಿಕಾರಿಗಳ ಬಗ್ಗೆ ಅವಿಶ್ವಾಸ ಮೂಡಿದಲ್ಲಿ ಅವರನ್ನು ಹು¨ªೆಯಿಂದ ವಾಪಸ್‌ ಕರೆಸಿಕೊಳ್ಳಲು ಅವಕಾಶವಿರುವುದಿಲ್ಲ. ಅನಿವಾರ್ಯವಾಗಿ ಅವರ 5 ವರ್ಷದ ಅವಧಿ ಪೂರೈಸುವವರೆಗೆ ಸಹಿಸಿಕೊಳ್ಳಬೇಕಾಗಿದೆ. ಇಂತಹ ವಿಚಿತ್ರ ಸನ್ನಿವೇಶ ಎದುರಾದಲ್ಲಿ ಸಂಘದ ವ್ಯವಹಾರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.

ಆಯ್ಕೆಗೊಂಡ ಪದಾಧಿಕಾರಿಗಳು ಆಡಳಿತ ಮಂಡಳಿಯ ಸದಸ್ಯರ ವಿಶ್ವಾಸದೊಂದಿಗೆ ಸಹಕಾರ ಸಂಘವನ್ನು ಮುನ್ನಡೆಸಬೇಕು. ಯಾವುದೇ ವಿಷಯದ ಬಗ್ಗೆ ಭಿನ್ನಾಭಿಪ್ರಾಯ ಉಂಟಾದಲ್ಲಿ ಆಡಳಿತ ಮಂಡಳಿಯ ಮುಖ್ಯಸ್ಥರಾದ ಅಧ್ಯಕ್ಷರು ಸದಸ್ಯರಿಗೆ ಮನವರಿಕೆ ಮಾಡಿ, ಒಮ್ಮತ ಮೂಡಿಸಲು ಪ್ರಯತ್ನಿಸಬೇಕು. ಇಲ್ಲವೇ ಬಹುಮತದ ನಿರ್ಧಾರವನ್ನು ಒಪ್ಪಿಕೊಳ್ಳಬೇಕು. ಆದರೆ, ಬಹಳಷ್ಟು ಸಹಕಾರ ಸಂಘಗಳಲ್ಲಿ ಹೀಗೆ ವ್ಯವಹಾರ ನಡೆಯುತ್ತಿದೆಯೇ ಎಂಬುದು ಪ್ರಶ್ನೆ.

ಸಹಕಾರ ಸಂಸ್ಥೆ ಅಭಿವೃದ್ಧಿ ಪಥದಲ್ಲಿ ಸಾಗಿ, ಸದಸ್ಯರಿಗೆ ಉತ್ತಮ ಸೇವೆ ಸಿಗಬೇಕೆಂದರೆ ಆಡಳಿತ ಮಂಡಳಿಯ ಜೊತೆಗೆ ಜೊತೆಗೆ ಸಂಸ್ಥೆಯ ಅಧ್ಯಕ್ಷರ ಪಾತ್ರವೂ ಅತಿ ಮುಖ್ಯ. ಅಸಮರ್ಥರಾದಲ್ಲಿ ಹಾಗೂ ಆಡಳಿತ ಮಂಡಳಿಯ ಸದಸ್ಯರ ಸಹಕಾರ ಪಡೆಯುವಲ್ಲಿ ವಿಫ‌ಲರಾದಲ್ಲಿ ಎಲ್ಲವೂ ಅಯೋಮಯ. ಇದರಿಂದ ಸಂಘ ಹಾಗೂ ಸಂಘದ ಸದಸ್ಯರು ಸಂಕಷ್ಟ ಎದುರಿಸುವುದು ಶತಃಸಿದ್ಧ.

ಯಾವುದೇ ವಿಷಯಗಳು ಬಹುಮತದ ಆಧಾರದಲ್ಲಿಯೇ ನಿರ್ಧಾರಗೊಳ್ಳಬೇಕು. ಅಧ್ಯಕ್ಷರಾದವರು ಆಡಳಿತ ಮಂಡಳಿಯ ಪೂರ್ವಾನುಮತಿಯೊಡನೆ ಪ್ರಮುಖ ನಿರ್ಧಾರ ಕೈಗೊಳ್ಳಬೇಕೆ ವಿನಃ ಸ್ವತಂತ್ರವಾಗಿ ಎÇÉಾ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಕರ್ನಾಟಕ ಸಹಕಾರ ಕಾಯಿದೆಯಲ್ಲಿ ಅವಕಾಶವಿಲ್ಲ. ಅಧ್ಯಕ್ಷರಾದವರು ಆಡಳಿತ ಮಂಡಳಿ ಸದಸ್ಯರ ಬೆಂಬಲ ಕಳೆದುಕೊಂಡಲ್ಲಿ ಸಂಘವನ್ನು ಮುನ್ನಡೆಸುವುದು ದೂರದ ಮಾತು.

ಸುಪ್ರೀಂಕೋರ್ಟ್‌ ಹೇಳಿದ್ದೇನು?

ಕರ್ನಾಟಕ ಸಹಕಾರ ಕಾಯಿದೆ ಮಾತ್ರವಲ್ಲದೇ ಇತರ ರಾಜ್ಯ ಸಹಕಾರ ಕಾಯಿದೆಯಲ್ಲಿಯೂ ಇಂತಹ ಲೋಪವನ್ನು ಸುಪ್ರೀಂಕೋರ್ಟು ಗಮನಿಸಿ, ಮಾರ್ಚ್‌ 2015ರಲ್ಲಿ ವಿಪುಲಭಾಯಿ ಎಂ.ಚೌಧರಿ ವರ್ಸಸ್‌ ಗುಜರಾತ್‌ ಕೋ-ಆಪರೇಟಿವ್‌ ಮಿಲ್ಕ… ಮಾರ್ಕೆಟಿಂಗ್‌ ಫೆಡರೇಶನ್‌ ಲಿಮಿಟೆಡ್‌ ಮತ್ತು ಇತರರು (ಸಿವಿಲ… ಅಪೀಲ… ನಂ.3047/2015) ದಾವೆಯಲ್ಲಿ ಐತಿಹಾಸಿಕ ತೀರ್ಪು ನೀಡಿದೆ. ಆ ತೀರ್ಪು ಅಸಹಾಯಕತೆಗೆ ಒಳಗಾಗಿದ್ದ ಸಹಕಾರಿಗಳಲ್ಲಿ ಆಶಾಭಾವನೆ ಮೂಡಿಸಿ, ಸಹಕಾರ ಸಂಘಗಳು ಎದುರಿಸುತ್ತಿದ್ದ ಕೆಲ ಸಮಸ್ಯೆಗಳಿಗೆ ಪರಿಹಾರ ಒದಗಿಸಿದೆ.

ನ್ಯಾಯಾಲಯವು ಸಹಕಾರ ಸಂಸ್ಥೆಗಳ ಉದ್ದೇಶ, ಅದರ ರಚನೆ, ಚುನಾವಣೆಯ ರೀತಿ, 1904ರಲ್ಲಿ ರಚನೆಯಾದ ಸಹಕಾರ ಕಾಯಿದೆಯಿಂದ 2012ರಲ್ಲಿ ಆದ ಸಹಕಾರ ಕಾಯಿದೆ ತಿದ್ದುಪಡಿ, ಸಂವಿಧಾನದ ಆಶಯ, ಪ್ರಜಾಪ್ರಭುತ್ವದ ರೀತಿ-ನೀತಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ಕೇರಳ, ಆಂಧ್ರಪ್ರದೇಶ, ಬಾಂಬೆ ಮತ್ತು ಪಂಚಾಬ್‌ ಅಂಡ್‌ ಹರಿಯಾಣ ಹೈಕೋರ್ಟ್‌ಗಳು ನೀಡಿರುವ ತೀರ್ಪುಗಳನ್ನು ಪರಾಮರ್ಶಿಸಿ ಸಹಕಾರ ವ್ಯವಸ್ಥೆಯಲ್ಲಿ ಅವಿಶ್ವಾಸ ನಿರ್ಣಯದ ವಿಚಾರದಲ್ಲಿ ಉಂಟಾಗುತ್ತಿರುವ ಗೊಂದಲ ನಿವಾರಣೆಗೆ ಸೂತ್ರದ ರೀತಿಯಲ್ಲಿ ಐತಿಹಾಸಿಕ ತೀರ್ಪನ್ನು ನೀಡಿದೆ.

ನ್ಯಾಯಾಲಯಗಳು ಕಾಯಿದೆ ಅಥವಾ ನಿಯಮ ಅಥವಾ ಬೈಲಾದಲ್ಲಿ ಅವಿಶ್ವಾಸದ ಬಗ್ಗೆ ಹೇಳದಿದ್ದರೂ, ಸಂವಿಧಾನದ ಸ್ಫೂರ್ತಿ ಹಾಗೂ ಆಶಯದಂತೆ ಈ ವಿಚಾರವನ್ನು ಪರಿಶೀಲಿಸಬೇಕು ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ.

ಸಹಕಾರ ಸಂಸ್ಥೆಗಳು ಪ್ರಜಾಪ್ರಭುತ್ವ ರೀತಿ-ನೀತಿಗನುಗುಣವಾಗಿ ರಚನೆಯಾಗುವುದರಿಂದ ಸಹಕಾರ ಕಾಯಿದೆ ಮತ್ತು ನಿಯಮ ಹಾಗೂ ಬೈಲಾಗಳಲ್ಲಿ ಪ್ರಜಾಪ್ರಭುತ್ವದ ರೀತಿ-ನೀತಿಗಳನ್ನು ಅಳವಡಿಸಿಕೊಳ್ಳಬೇಕು. ಭಾರತದ ಸಂವಿಧಾನದ ವಿಧಿ 243ಜಡ್‌ ಎಚ್‌(ಬಿ) ರಲ್ಲಿ ಪದಾಧಿಕಾರಿ ಆಯ್ಕೆಯನ್ನು ಪ್ರತಿಪಾದಿಸಿದ ಸ್ವರೂಪದಲ್ಲಿಯೇ ಪದಾಧಿಕಾರಿಯನ್ನು ಅವಿಶ್ವಾಸ ನಿರ್ಣಯದ ಮೂಲಕ ಕೆಳಗಿಳಿಸಬಹುದು ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಸಹಕಾರ ಸಂಸ್ಥೆಗಳು ರಚನೆಯಾಗುವುದರಿಂದ ಪದಾಧಿಕಾರಿಗಳನ್ನು ಅವಿಶ್ವಾಸ ನಿರ್ಣಯದ ಮೂಲಕ ಹು¨ªೆಯಿಂದ ಕೆಳಗಿಳಿಸುವುದಕ್ಕೆ ಅವಕಾಶವಿದ್ದು, ಅಗತ್ಯ ಶಾಸನಬದ್ಧ ಬದಲಾವಣೆ ಕಡ್ಡಾಯವೆಂದು ತನ್ನ ನಿಲುವನ್ನು ಸುಪ್ರೀಂಕೋರ್ಟ್‌ ತಿಳಿಸಿದೆ.

ಕೇಂದ್ರ ಸಹಕಾರ ಕಾಯಿದೆ ಅಥವಾ ರಾಜ್ಯ ಸಹಕಾರ ಕಾಯಿದೆಯಡಿ ನೋಂದಣಿಯಾದ ಸಹಕಾರ ಸಂಘಗಳಲ್ಲಿ ಪದಾಧಿಕಾರಿಯಾಗಿ ಆಯ್ಕೆಗೊಂಡ 2 ವರ್ಷಗಳ ನಂತರ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬಹುದು. ಆ ರೀತಿ ಮಂಡಿಸಿದ ಅವಿಶ್ವಾಸ ನಿರ್ಣಯವು ಬಹುಮತ ಗಳಿಸದೆ ಸೋತಲ್ಲಿ ನಂತರ ಒಂದು ವರ್ಷದೊಳಗೆ ಮತ್ತೆ ಅವರ ವಿರುದ್ಧ ಹೊಸ ಅವಿಶ್ವಾಸ ನಿರ್ಣಯ ಮಂಡಿಸುವಂತಿಲ್ಲ. ಅವಿಶ್ವಾಸ ನಿರ್ಣಯ ಮಂಡಿಸಲು ಆಡಳಿತ ಮಂಡಳಿ ಸದಸ್ಯರ ಮೂರನೇ ಒಂದು ಭಾಗದಷ್ಟು ಸದಸ್ಯರು ಕೋರಿಕೆ ಸಲ್ಲಿಸುವುದು ಕಡ್ಡಾಯ. ಮಂಡಿಸಲಾದ ಅವಿಶ್ವಾಸ ನಿರ್ಣಯ ಅಂಗೀಕಾರಗೊಳ್ಳಬೇಕಾದಲ್ಲಿ ಸಭೆಯಲ್ಲಿ ಹಾಜರಿದ್ದ ಸದಸ್ಯರಲ್ಲಿ ಶೇಕಡಾ 51ರಷ್ಟು ಮಂದಿ ಅವಿಶ್ವಾಸ ನಿರ್ಣಯದ ಪರವಿರಬೇಕೆಂದು ಸುಪ್ರೀಂಕೋರ್ಟ್‌ ತನ್ನ ತೀರ್ಪಿನಲ್ಲಿ ತಿಳಿಸಿದೆ.

97ನೇ ಸಂವಿಧಾನ ತಿದ್ದುಪಡಿಯ ದೃಷ್ಟಿಯಿಂದ ಗುಜರಾತ್‌, ಆಂಧ್ರಪ್ರದೇಶ, ಬಾಂಬೆ, ಕೇರಳ, ಪಂಜಾಬ… ಅಂಡ್‌ ಹರಿಯಾಣ ಹೈಕೋರ್ಟ್‌ಗಳು ಅವಿಶ್ವಾಸ ನಿರ್ಣಯದ ದಾವೆಗಳಲ್ಲಿ ನೀಡಿರುವ ತೀರ್ಪು ಒಳ್ಳೆಯ ಕಾನೂನಿಗೆ ಅನುಗುಣವಾಗಿಲ್ಲವೆಂದು ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿದೆ. ಈ ತೀರ್ಪು ಗೊಂದಲದಲ್ಲಿದ್ದ ಹಾಗೂ ಅವಿಶ್ವಾಸ ನಿರ್ಣಯದ ಸಮಸ್ಯೆಯಲ್ಲಿ ಸಿಲುಕಿದ್ದ ಸಹಕಾರಿಗಳಿಗೆ ಹಾಗೂ ಸಹಕಾರಿ ಸಂಘಗಳಿಗೆ ದಾರಿ ದೀಪದಂತಿದೆ. ಸಹಕಾರ ಸಂಘಗಳು ಈ ಸಮಸ್ಯೆಯಿಂದ ಹೊರಬರುವ ಆಶಾಕಿರಣವನ್ನೂ ಇದು ಮೂಡಿಸಿದೆ.

ಎ.ಎಸ್‌.ನಾಗರಾಜಸ್ವಾಮಿ, ಬೆಂಗಳೂರು

 

Trending videos

 
ಓದುಗರ ಅಭಿಪ್ರಾಯ
Back to Top