Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸಿರಿಯಾದಲ್ಲಿ ನಿಜಕ್ಕೂ ಏನಾಗುತ್ತಿದೆ?

ಸಿರಿಯಾ ಎಂಬ ಪುಟ್ಟ ಮಧ್ಯಪ್ರಾಚ್ಯ ರಾಷ್ಟ್ರದಲ್ಲಿ ಹಿಂಸಾಚಾರ ಶುರುವಾಗಿದ್ದು 2011ರಲ್ಲಿ. ಅಂದಿನಿಂದ ಇಂದಿನವರೆಗೂ ಅಮಾನುಷ ನಾಗರಿಕ ಯುದ್ಧದಿಂದ ಆ ದೇಶ ತತ್ತರಿಸುತ್ತಿದೆ. ದೇಶದ ಅಧ್ಯಕ್ಷ ಬಶರ್‌ ಅಲ್‌ ಅಸದ್‌ ಹಾಗೂ ಬಂಡುಕೋರರ ನಡುವೆ ನಡೆಯುತ್ತಿರುವ ಕಿತ್ತಾಟವೇ ಈ ಎಲ್ಲ ಸಮಸ್ಯೆಗಳ ಮೂಲ. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ ಈ ಆಂತರಿಕ ಯುದ್ಧ ಇಲ್ಲಿಯವರೆಗೆ 2 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. 40 ಲಕ್ಷಕ್ಕೂ ಹೆಚ್ಚು ಜನರು ಸಿರಿಯಾ ಬಿಟ್ಟು ಅಕ್ಕಪಕ್ಕದ ದೇಶಗಳಿಗೆ ವಲಸೆ ಹೋಗಿದ್ದಾರೆ. ಅವರಲ್ಲಿ ಅರ್ಧದಷ್ಟು ಮಂದಿ ಮಕ್ಕಳು. ಹೆಚ್ಚಿನ ನಿರಾಶ್ರಿತರು ಯುರೋಪ್‌ಗೆ ನುಸುಳಿ ಬ್ರಿಟನ್‌, ಜರ್ಮನಿಯಂತಹ ದೇಶಗಳಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. 2012ರ ಜುಲೈನಲ್ಲೇ ಅಂತಾರಾಷ್ಟ್ರೀಯ ರೆಡ್‌ ಕ್ರಾಸ್‌ ಸಂಸ್ಥೆ ಸಿರಿಯಾದಲ್ಲಿನ ಆಂತರಿಕ ಹಿಂಸಾಚಾರ ನಾಗರಿಕ ಯುದ್ಧದ ರೂಪ ಪಡೆಯುತ್ತಿದೆ ಎಂದು ಎಚ್ಚರಿಸಿತ್ತು. ಇಷ್ಟಕ್ಕೂ ಈ ಹಿಂಸಾಚಾರದ ಹಿಂದಿರುವ ನಿಜವಾದ ಕಾರಣಗಳೇನು? ಇದು ಇನ್ನಷ್ಟು ಬೆಳೆಯದಂತೆ ನೋಡಿಕೊಳ್ಳಲು ಏನಾದರೂ ಮಾಡಲಾಗುತ್ತಿದೆಯೇ?

ಸಣ್ಣ ಪ್ರತಿಭಟನೆಯಿಂದ ಕಿಚ್ಚು

2011ರಲ್ಲಿ ಸಿರಿಯಾದ ಡೇರಾ ಎಂಬ ನಗರದಲ್ಲಿ ಮೊದಲು ಸಮಸ್ಯೆ ಶುರುವಾಯಿತು. 15 ಶಾಲಾ ಮಕ್ಕಳು ಸರ್ಕಾರದ ವಿರುದ್ಧ ಗೋಡೆಗಳ ಮೇಲೆ ಏನೋ ಬರೆದರು ಎಂಬ ಕಾರಣಕ್ಕೆ ಅವರನ್ನು ಬಂಧಿಸಿ, ದೌರ್ಜನ್ಯ ನಡೆಸಲಾಗಿತ್ತು. ಅದನ್ನು ಪ್ರತಿಭಟಿಸಲು ಜನರು ಬೀದಿಗಿಳಿದಿದ್ದರು. ಆರಂಭದಲ್ಲಿ ಪ್ರತಿಭಟನೆ ಶಾಂತಿಯುತವಾಗಿತ್ತು. ಮಕ್ಕಳನ್ನು ಬಿಡುಗಡೆ ಮಾಡಬೇಕು, ದೇಶದಲ್ಲಿ ಪ್ರಜಾಪ್ರಭುತ್ವ ಜಾರಿಗೆ ತರಬೇಕು, ಜನರಿಗೆ ಹೆಚ್ಚು ಸ್ವಾತಂತ್ರ್ಯ ನೀಡಬೇಕು ಎಂದು ಹೋರಾಟಗಾರರು ಆಗ್ರಹಿಸುತ್ತಿದ್ದರು. ಆದರೆ ಸರ್ಕಾರ ಇದಕ್ಕೆ ಸಿಟ್ಟಿನ ಪ್ರತಿಕ್ರಿಯೆ ನೀಡಿತು. ಹೋರಾಟಗಾರರ ಮೇಲೆ ಸೇನೆ ಬಳಸಿ ಗುಂಡಿನ ದಾಳಿ ನಡೆಸಿತು. ಆ ದಾಳಿಯಲ್ಲಿ ನಾಲ್ವರು ಮೃತಪಟ್ಟರು. ಮರುದಿನ ಇವರ ಶವಸಂಸ್ಕಾರದಲ್ಲಿ ಭಾಗವಹಿಸಿದವರ ಮೇಲೂ ಸೇನೆ ಮತ್ತೆ ಗುಂಡಿನ ದಾಳಿ ನಡೆಸಿತು. ಜನರಿಗೆ ಆಘಾತವಾಯಿತು. ಅದು ಆಕ್ರೋಶವಾಗಿ ಪರಿವರ್ತನೆಯಾಯಿತು. ನಂತರ ಕ್ಷಿಪ್ರವಾಗಿ ದೇಶಾದ್ಯಂತ ಪ್ರತಿಭಟನೆಗಳು ಹರಡಿದವು. ಎಲ್ಲೆಡೆ ಹಿಂಸಾಚಾರ ಶುರುವಾಯಿತು.

ಅಸದ್‌ ಎಂಬ ಹಟಮಾರಿ

ಆರಂಭದಲ್ಲಿ ಜನರು ಪ್ರಜಾಪ್ರಭುತ್ವ ಹಾಗೂ ಹೆಚ್ಚಿನ ಸ್ವಾತಂತ್ರ್ಯವನ್ನು ಮಾತ್ರ ಕೇಳುತ್ತಿದ್ದರು. ಆದರೆ, ಯಾವಾಗ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಹೋರಾಟಗಾರರ ಮೇಲೆ ಸರ್ಕಾರ ಗುಂಡಿನ ದಾಳಿ ನಡೆಸಿತೋ ಆಗ ಅವರು ಅಧ್ಯಕ್ಷ ಬಶರ್‌ ಅಲ್‌ ಅಸದ್‌ ರಾಜೀನಾಮೆ ನೀಡಬೇಕೆಂದು ಆಗ್ರಹಿಸತೊಡಗಿದರು. ಅಧ್ಯಕ್ಷರು ಒಪ್ಪಲಿಲ್ಲ. ಆದರೆ, ದೇಶವನ್ನು ಮುನ್ನಡೆಸುವ ರೀತಿಯಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದರು. ಜನರು ಅದನ್ನು ನಂಬಲಿಲ್ಲ. ಅಧ್ಯಕ್ಷ ಅಸದ್‌ ಅವರ ಬೆಂಬಲಿಗರೂ ಸಿರಿಯಾದಲ್ಲಿ ದೊಡ್ಡ ಸಂಖ್ಯೆಯಲ್ಲೇ ಇದ್ದಾರೆ. ಈಗಲೂ ಅವರು ಅಸದ್‌ರನ್ನು ಹಾಗೂ ಅವರ ಸರ್ಕಾರವನ್ನು ಬೆಂಬಲಿಸುತ್ತಿದ್ದಾರೆ.

1 ಸಾವಿರ ಗುಂಪುಗಳು!

ಸಿರಿಯಾದಲ್ಲಿ ಅಧ್ಯಕ್ಷ ಅಸದ್‌ ವಿರುದ್ಧ ಹೋರಾಡುತ್ತಿರುವುದು ಒಂದೇ ಗುಂಪಲ್ಲ. ರಾಜೀನಾಮೆ ಕೇಳುತ್ತಿರುವವರಲ್ಲಿ ಬಂಡುಕೋರರು, ರಾಜಕೀಯ ಪಕ್ಷಗಳು, ದೇಶಕ್ಕೆ ಮರಳಲಾಗದೆ ಅಜ್ಞಾತವಾಸದಲ್ಲಿರುವವರು ಹೀಗೆ ಬೇರೆ ಬೇರೆ ವರ್ಗಗಳಿವೆ. ಅಂದಾಜಿನ ಪ್ರಕಾರ ಸಿರಿಯಾದಲ್ಲಿ ಆಡಳಿತದ ವಿರುದ್ಧ ಹೋರಾಡುತ್ತಿರುವ 1 ಸಾವಿರಕ್ಕೂ ಹೆಚ್ಚು ಗುಂಪುಗಳಿವೆ! ಅವರ ಬಳಿ 1 ಲಕ್ಷಕ್ಕೂ ಹೆಚ್ಚು ಹೋರಾಟಗಾರರಿದ್ದಾರೆ.

ಐಸಿಸ್‌ ಉಗ್ರರ ಪ್ರವೇಶ

ಆದರೆ ಈಗ ಈ ಆಂತರಿಕ ಯುದ್ಧ ಕೇವಲ ಸರ್ಕಾರ ಹಾಗೂ ಬಂಡುಕೋರ ಹೋರಾಟಗಾರರ ನಡುವಿನ ಯುದ್ಧವಾಗಷ್ಟೇ ಉಳಿದಿಲ್ಲ. ಅವರ ನಡುವೆ ಐಸಿಸ್‌ ಉಗ್ರರು ಪ್ರವೇಶಿಸಿದ್ದಾರೆ.
2014ರ ಆರಂಭದಲ್ಲಿ ಸಿರಿಯಾದ ನೆರೆರಾಷ್ಟ್ರವಾದ ಇರಾಕ್‌ನಲ್ಲಿ ಇಸ್ಲಾಮಿಕ್‌ ಉಗ್ರರು ದೊಡ್ಡ ದೊಡ್ಡ ಪ್ರದೇಶಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಆರಂಭಿಸಿದ್ದರು. ತಮ್ಮ ಮಾತು ಕೇಳದ ಎಲ್ಲರನ್ನೂ ಕೊಲ್ಲುವ ಕುಖ್ಯಾತಿ ಐಸಿಸ್‌ನದು. ಈ ಉಗ್ರರು ನಿಧಾನವಾಗಿ ಸಿರಿಯಾದೊಳಗೆ ಪ್ರವೇಶಿಸಿದರು. ಒಡಕಿನ ಲಾಭ ಪಡೆದು ಒಂದಷ್ಟು ಜಾಗಗಳನ್ನು ಆಕ್ರಮಿಸಿಕೊಂಡರು. ಉಗ್ರರ ಈ ಆಕ್ರಮಣ ತಡೆಯಲು 2014ರ ಅಂತ್ಯದಲ್ಲಿ ಅಮೆರಿಕ, ಬ್ರಿಟನ್‌ ಮುಂತಾದ ದೇಶಗಳು ವೈಮಾನಿಕ ದಾಳಿ ನಡೆಸಿದವು.

ರಾಸಾಯನಿಕ ಬಾಂಬ್‌ ಹಾಕಿದ್ಯಾರು?

ಇದಕ್ಕೂ ಮುನ್ನವೇ ಸಿರಿಯಾದಲ್ಲಿ ಹೋರಾಟಗಾರರ ಮೇಲೆ ರಾಸಾಯನಿಕ ಬಾಂಬ್‌ ಹಾಕಲಾಯಿತು. ಅದರ ಘೋರ ಪರಿಣಾಮ ನೋಡಿ ಜಗತ್ತೇ ಮರುಗಿತ್ತು. ಇಂತಹದ್ದನ್ನು ತಡೆಯಲು ಏನು ಮಾಡಬೇಕೆಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಯಿತು. ವಿಶ್ವಸಂಸ್ಥೆ ಕೂಡ ತನಿಖೆ ನಡೆಸಿತು. ಆದರೆ ಜಗತ್ತಿನಾದ್ಯಂತ ನಿಷೇಧಿಸಲಾಗಿರುವ ರಾಸಾಯನಿಕ ಬಾಂಬ್‌ ಹಾಕಿದ್ದು ಯಾರೆಂಬುದು ಮಾತ್ರ ಬಗೆಹರಿಯಲಿಲ್ಲ. ಸಿರಿಯಾದ ಸರ್ಕಾರ ತಾನು ಹಾಕಿಲ್ಲ, ಪ್ರತಿಭಟನಾಕಾರರೇ ರಾಸಾಯನಿಕ ಅಸ್ತ್ರ ಬಳಸಿದ್ದಾರೆ ಎಂದು ಹೇಳುತ್ತಿದೆ.

ಸಿರಿಯಾದಲ್ಲಿ ನಡೆಯುತ್ತಿರುವುದನ್ನು ನೋಡಿಕೊಂಡು ಸುಮ್ಮನಿರಬಾರದು ಎಂದು ಅನೇಕ ದೇಶಗಳು ಹೇಳಿದರೂ ಅಲ್ಲಿನ ವ್ಯವಹಾರದಲ್ಲಿ ಮಧ್ಯಪ್ರವೇಶಿಸಲು ಅವುಗಳಿಗೂ ತೊಡಕುಗಳಿವೆ. ಸೇನೆ ಬಳಸಿ ಹಿಂಸಾಚಾರ ತಡೆಯಲು ಬ್ರಿಟನ್‌ ಹೊರಟಾಗ ಬ್ರಿಟನ್ನಿನ ಸಂಸದರೇ ತಡೆದರು. ನಂತರ ಅಮೆರಿಕ ಹಾಗೂ ಫ್ರಾನ್ಸ್‌ ಸರ್ಕಾರಗಳು ಸಿರಿಯಾ ಮೇಲೆ ಕ್ಷಿಪಣಿ ದಾಳಿ ನಡೆಸಲು ಯೋಚಿಸಿದವು. ಆದರೆ ಸಿರಿಯಾ ಹಾಗೂ ರಷ್ಯಾ ಸ್ನೇಹಿತ ರಾಷ್ಟ್ರಗಳು. 2013ರ ಸೆಪ್ಟೆಂಬರ್‌ನಲ್ಲಿ ರಷ್ಯಾ ಒಂದು ಸಂಧಾನ ಸೂತ್ರ ಮುಂದಿಟ್ಟಿತು: "ಸಿರಿಯಾ ಸರ್ಕಾರ ತನ್ನ ಬಳಿಯಿರುವ ರಾಸಾಯನಿಕ ಅಸ್ತ್ರಗಳನ್ನು ನಾಶಪಡಿಸಬೇಕು. ಮುಂದೆಂದೂ ಅವುಗಳನ್ನು ಬಳಸಬರದು.' ರಾಸಾಯನಿಕ ಅಸ್ತ್ರಗಳನ್ನು ನಾಶಪಡಿಸುವ ಪ್ರಕ್ರಿಯೆ ಒಂದೇ ತಿಂಗಳಲ್ಲಿ ಶುರುವಾಯಿತು. ಆ ಯೋಜನೆಯಲ್ಲಿ ಕೆಲಸ ಮಾಡಿದವರಿಗೆ ನೋಬೆಲ್‌ ಶಾಂತಿ ಪ್ರಶಸ್ತಿ ಸಿಕ್ಕಿತು.

ಜನ ಏಕೆ ದೇಶ ಬಿಡಬೇಕು?

ಈಗ ಸಿರಿಯಾದ ಆಂತರಿಕ ಹಿಂಸಾಚಾರದಲ್ಲಿ ಸಿಲುಕಿ ದೊಡ್ಡ ಸಂಖ್ಯೆಯಲ್ಲಿ ನಿರಾಶ್ರಿತರು ದೇಶ ತೊರೆದು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಎಲ್ಲಾದರೂ ಹೋಗಿ ಜೀವ ಉಳಿಸಿಕೊಂಡರೆ ಸಾಕೆಂದು ಅವರು ವಲಸೆ ಹೋಗುತ್ತಿದ್ದಾರೆ. ಪ್ರತಿದಿನ ಸಾವಿರಾರು ನಿರಾಶ್ರಿತರು ಸಿರಿಯಾದ ಗಡಿಯಲ್ಲಿ ನಿಂತು ಪಕ್ಕದ ಜೋರ್ಡಾನ್‌, ಲೆಬನಾನ್‌, ಟರ್ಕಿ ಮತ್ತು ಇರಾಕ್‌ಗೆ ನುಗ್ಗಲು ಹವಣಿಸುತ್ತಿದ್ದಾರೆ. ಗಲಭೆ ಶುರುವಾದಂದಿನಿಂದ 30 ಲಕ್ಷಕ್ಕೂ ಹೆಚ್ಚು ಸಿರಿಯನ್ನರು ದೇಶ ತೊರೆದಿದ್ದಾರೆ. ಇತ್ತೀಚಿನ ಇತಿಹಾಸದಲ್ಲೇ ಇದು ಅತಿ ದೊಡ್ಡ ಜಾಗತಿಕ ವಲಸೆ. ಇನ್ನೂ 65 ಲಕ್ಷ ಜನ, ಅವರಲ್ಲಿ ಅರ್ಧದಷ್ಟು ಮಕ್ಕಳು, ಸಿರಿಯಾದಲ್ಲೇ ತಮ್ಮ ಮನೆ ಬಿಟ್ಟು ದೂರ ಹೋಗಿದ್ದಾರೆ. ಅವರೆಲ್ಲ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಆದರೆ, ಸಿರಿಯಾದೊಳಗೆ ಜನರಿಗೆ ಸಹಾಯ ಮಾಡುವುದು ಕಷ್ಟ ಹಾಗೂ ಅಪಾಯ ಎಂದು ಪರಿಹಾರ ಕಾರ್ಯಾಚರಣೆ ನಡೆಸುತ್ತಿರುವ ಏಜೆನ್ಸಿಗಳು ಹೇಳುತ್ತಿವೆ. ಜನರು ಯುರೋಪ್‌ನಲ್ಲಿ ಹೊಸ ಬದುಕು ಹುಡುಕುತ್ತಿದ್ದಾರೆ. ಕಳೆದ ವರ್ಷ 6 ಸಾವಿರ ಸಿರಿಯನ್ನರು ಕಾಲ್ನಡಿಗೆಯಲ್ಲಿ ಗಡಿ ದಾಟಿ ಬಲ್ಗೇರಿಯಾಕ್ಕೆ ಹೋಗಿದ್ದಾರೆ. ಅವರೆಲ್ಲ ಶಾಲೆ-ಕಾಲೇಜುಗಳಂತಹ ಪರಿತ್ಯಕ್ತ ಕಟ್ಟಡಗಳಲ್ಲಿ ವಾಸಿಸುತ್ತಿದ್ದಾರೆ.

ಗಲಭೆ ನಿಲ್ಲುವುದು ಯಾವಾಗ?

ಸದ್ಯಕ್ಕಂತೂ ಈ ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣಿಸುತ್ತಿಲ್ಲ. ಸರ್ಕಾರ ಹಾಗೂ ಪ್ರತಿಭಟನಾಕಾರರಲ್ಲಿ ಯಾರೊಬ್ಬರೂ ಪಟ್ಟು ಸಡಿಲಿಸುತ್ತಿಲ್ಲ. ಅವರ ನಡುವೆ ಗಂಭೀರ ಮಾತುಕತೆಗಳೂ ನಡೆಯುತ್ತಿಲ್ಲ. 2013ರಲ್ಲೇ ಅಮೆರಿಕ ಹಾಗೂ ಬ್ರಿಟನ್‌ ದೇಶಗಳು ಸಿರಿಯಾದ ಹೋರಾಟಗಾರರಿಗೆ ಔಷಧ, ವಾಹನ, ಸಂಪರ್ಕ ಸಾಧನಗಳ ಪೂರೈಕೆ ನಿಲ್ಲಿಸಿವೆ. ಇದರ ನಡುವೆ ಸಿರಿಯಾದ ಸರ್ಕಾರ ಹಾಗೂ ಬಂಡಾಯಗಾರರು ಐಸಿಸ್‌ ಉಗ್ರರ ವಿರುದ್ಧವೂ ಹೋರಾಡಬೇಕಿದೆ. ಈ ಸಂಘರ್ಷದ ನಡುವೆ ಸಿಲುಕಿರುವ ಜನಸಾಮಾನ್ಯರು ತಮ್ಮ ಮನೆ, ಕುಟುಂಬಗಳನ್ನು ಕಳೆದುಕೊಂಡು ಅನಾಥರಾಗುತ್ತಿದ್ದಾರೆ. ಬಹಳ ಜನ ತಾತ್ಕಾಲಿಕ ಶೆಡ್‌ಗಳಲ್ಲಿ ದಿನ ಕಳೆಯುತ್ತಿದ್ದಾರೆ. ಅವರಿಗೆ ಅನೇಕ ದೇಶಗಳು ಆಹಾರ ಹಾಗೂ ತುರ್ತು ಸೇವೆ ಪೂರೈಸುತ್ತಿದ್ದರೂ, ಅಮೆರಿಕ ಮತ್ತು ಬ್ರಿಟನ್‌ ದೇಶಗಳು ತಾವು ನೀಡುವ ನೆರವು ಬಂಡುಕೋರರ ಪಾಲಾಗಬಹುದು ಎಂಬ ಆತಂಕದಿಂದ ಏನೂ ನೀಡುತ್ತಿಲ್ಲ.

ಈಗಲೂ ಅಮೆರಿಕ, ರಷ್ಯಾ, ಬ್ರಿಟನ್‌ ಮತ್ತು ಫ್ರಾನ್ಸ್‌ಗಳಂತಹ ಪ್ರಬಲ ದೇಶಗಳ ನಡುವೆ ಸಿರಿಯಾದಲ್ಲಿ ಶಾಂತಿ ಸ್ಥಾಪಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ, ಸಿರಿಯಾದ ವ್ಯವಹಾರದಲ್ಲಿ ಕೈಹಾಕಲು ಪಾಶ್ಚಾತ್ಯ ರಾಷ್ಟ್ರಗಳಿಗೆ ಆತಂಕವೂ ಇದೆ. ಅವುಗಳಿಗೆ ರಷ್ಯಾವನ್ನು ಎದುರು ಹಾಕಿಕೊಳ್ಳಲು ಇಷ್ಟವಿಲ್ಲ. ಸಿರಿಯಾವನ್ನು ಕಾಪಾಡಲು ಹೋಗಿ ರಷ್ಯಾದ ಜೊತೆ ಯುದ್ಧಕ್ಕಿಳಿಯಲು ಅವು ಸುತರಾಂ ಸಿದ್ಧವಿಲ್ಲ.

ಸದ್ಯೋಜಾತ

 

Trending videos

 
ಓದುಗರ ಅಭಿಪ್ರಾಯ
Back to Top