Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮಳೆ ಹೆಜ್ಜೆಯ ಸೈಜೆಷ್ಟು?

ಮಳೆಗಾಲದ ಒಂದು ಪುಟ್ಟ ಏಕಾಂತ. ಹೊರಗೆ ಮಳೆ ಹುಯ್ದು, ನೆಲದ ಮೈಮೇಲೆ ನವಿರಾದ ಮುಳ್ಳುಗಳು ಎದ್ದಿವೆ. ಸಂಜೆ ಆರಕ್ಕೇ ಕತ್ತಲು, ಜೀ ಅಂತ ಸುರಿವ ಮಳೆಗೆ ಹಾದ ಕಾರಿನ ಗಾಲಿ ಜರ್ರಂತ ಸವೆದದ್ದು  ಸದ್ದಾಯಿತು. ಈಗ ತಾನೇ ಕೊಡೆ ಮಡಚಿ, ಒಳಗಡಿ ಇಟ್ಟ ಕಾಲುಗಳು ನೆಲದ ತುಂಬ ಹೆಜ್ಜೆ ಬರೆದಿವೆ.

ಅಮ್ಮನ ದೊಡ್ಡ ಕಾಲಿನ ಹೆಜ್ಜೆಯ ಹಿಂದೆ ಪುಟ್ಟ ಮಗನ ಕಾಲ್ಗಳು. ಕಗ್ಗತ್ತಲ ಹಜಾರದಲ್ಲಿ ಮೂಡಿದ ಅಮ್ಮನ ದೊಡ್ಡ ಹೆಜ್ಜೆಯೂ, ಕಂದನ ಪುಟ್ಟ ಹೆಜ್ಜೆಯೂ ಜಗತ್ತಿಗೆ ಪ್ರಕಟವಾಗದೇ ಸುಮ್ಮನೆ ಕುಳಿತಿವೆ, "ಅಮ್ಮ ಇವತ್ತೂ ಪವರ್‌ ಕಟ್ಟಾ' ಅಂದ ಕಂದ. ಕರೆಂಟು ಬರುವವರೆಗಾದರೂ ಎರಡು ಜೊತೆ ಅನ್‌ಸೈಜ್‌ ಹೆಜ್ಜೆಗಳು ಗಾಳಿಗೆ ಆರದೇ ಇರಲಿ ಅಂತ ಅವಳು ಒಂದು ಆಸೆ ಪಟ್ಟಳು. ಪುಟ್ಟ ಓಡಿ ಬಂದು ಕಿಟಕಿಯನ್ನು ತೆರೆದ. ಗಾಳಿಯ ಮೂಟೆ, ಬಜಾರ್‌ನಿಂದ ತಂದ ದಿನಸಿ ಮೂಟೆಯಂತೆ ದಸಕ್ಕನೆ ಕೋಣೆಯ ಒಳಗೆ ಚೆಲ್ಲಿಕೊಂಡಿತು, ಹಣೆಯ ಮಳೆಹನಿಗಳು ತಂಪಾದವು, ಪುಟ್ಟನ ಕಣ್ಣಿನ ಬಿಳಿಯ ಗೋಲದೊಳಗೆ ಮಳೆ ತನ್ನ ಮುಖ ನೋಡಿಕೊಂಡು ನಕ್ಕಂತಾಯ್ತು.

ಎಂಥ ಉದಾಸೀನ ಸಂಜೆ, ಮಳೆಗೆ ಪುಟ್ಟನ ಜೊತೆ ಮಾತಾಡುವುದಕ್ಕೆ ಪುರಸೊತ್ತಿಲ್ಲ, ಅಮ್ಮ ತಾನು ಮೊಬೈಲ್‌ ಆನ್‌ ಮಾಡಿ ವಾಟ್ಸಪ್‌ನಲ್ಲಿ ಯಾವುದಾದರೂ ಸಂದೇಶಗಳಿವೆಯೇ ಅಂತ ನೋಡುತ್ತಾ ಉಳಿದಳು, ಪುಟ್ಟನ ಜೊತೆ ಮಳೆಯೂ, ಅಮ್ಮನೂ ಮಾತಾಡಲೊಲ್ಲರು. ಆದರೆ ಗಾಳಿಯ ಜೊತೆ ನುಗ್ಗಿ ಬಂದ ಮಳೆಯ ಒಂದಷ್ಟು ಪುಟ್ಟ ಹನಿಗಳು ಸರಳುಗಳ ಮೇಲೆ ಕುಳಿತಿದ್ದವು, ಅದನ್ನು ತನ್ನ ಪುಟ್ಟ ಬೆರಳಲ್ಲಿ ಮುಟ್ಟಿದ ಪುಟ್ಟ.
ಅದು ಆಚೀಚೆ ಓಲಾಡಿ, ಅಲ್ಲೇ ಕುಳಿತುಕೊಂಡಿತು, ಸದ್ಯ ಜೋರಾಗಿ ನೂಕಿದ್ದರೆ ಆ ಹನಿ ಬಿದ್ದು ಬೆನ್ನು ಮುರಿದುಕೊಳ್ಳುತ್ತಿತ್ತಲ್ಲವೇ! ಈ ದಿನಾಂತ ಸಮಯದಲ್ಲಿ ಮಬ್ಟಾದ ಬೀದಿ, ಮಸುಕಾದ ಕೋಣೆ, ಒದ್ದೆಯಾದ ಕಿಟಕಿ ಗಾಜು, ಹೊದ್ದ ಮೌನವನ್ನು ಒದ್ದು ಓಡಿಸಿದ ಮಳೆಸದ್ದು, ಮೈಗೆಲ್ಲಾ ರೈನ್‌ಕೋಟಿದ್ದರೂ ಮುಂಗುರುಳು ಮಾತ್ರ ನೆನೆಸಿಕೊಳ್ಳುತ್ತಾ ತಲೆ ತಗ್ಗಿಸಿ ಮನೆಕಡೆ ಹೋಗುತ್ತಿರುವವ ಅನಾಮಿಕ ಬೈಕ್‌ ಸವಾರಿಣಿ, ನಿಂತ ನೀರಿನ ಅಂಗಳಕ್ಕೆ ಅಂಗಾಲೆತ್ತಿ ಕಾಳಿಂಗಮರ್ಧನ ಕೃಷ್ಣನಂತೆ ನಿಂತ ಎದುರು ಮನೆಯ ಚಿನ್ನಾರಿ. ಈ ಮಳೆಗಾಲದಲ್ಲಿ ಎಲ್ಲವೂ ಹಿಂಗೇ ಒಂದು ಆಲಸ್ಯದ ಸಂಚಾರಿಸ್ವರದಂತೆ ತುಯ್ಯುತ್ತಿವೆ.

ಅಮ್ಮನ ಫೋನೊಳಗೆ ಒಂದು ವಾಟ್ಸಪ್‌ ಫೋಟೋ ಬಂದು ಬಿತ್ತು, ವಾವ್‌ ಮಳೆ ಅಂತ ಉದ್ಗರಿಸಿದಳು, ಆಕಾಶದಲ್ಲಿ ಒಂದು ಪುಂಡ ಸಿಡಿಲು ಫ‌ಳಾರೆಂದು ತೂರಿ ಬಂತು, ಪುಟ್ಟ ಕಣ್ಣು ಮುಚ್ಚಿಕೊಂಡು ಭಯದಿಂದ ತತ್ತರಿಸಿದ. ಅಲ್ಲೊಂದು ಮಿಂಚು ಮಿಂಚಿ, ಕೋಣೆಯ ಕತ್ತಲನ್ನು ಬಯಲಾಗಿಸಿತು.

ಸಂಜೆಯ ಬಟ್ಟೆಯನ್ನು ಬಿಚ್ಚಿ, ಬಚ್ಚಲಲ್ಲಿ ನಿಲ್ಲಿಸಿ ಸ್ನಾನ ಮಾಡಿಸುತ್ತಿದ್ದಳು ಆಕಾಶಮಾತೆ. ಅದು ಪುಂಡಾಡಿಟಿಕೆ ಮಾಡುತ್ತಿತ್ತು, ಬಚ್ಚಲಿಂದ ಹರಿದ ಸ್ನಾನದ ನೀರಿಗೆ ಬೀದಿಯೆಲ್ಲಾ ಕೊಳೆಯಾಗಿತ್ತು, ರಾತ್ರಿಯ ಎದುರು ಕೂದಲೊಣಗಿಸಿಕೊಂಡು ನಿಲ್ಲುವ ಸಂಜೆಯಂತೆ ನಿಧಾನಕ್ಕೆ ಮಳೆಯ ಸದ್ದು ಕಮ್ಮಿ ಆಗುತ್ತಿತ್ತು, ಸಂಜೆಯ ಹಣೆಯಿಂದಿಳಿದ ಪುಟ್ಟ ಪುಟ್ಟ ಹನಿಯಂತೆ ಸೂರಿನ ಅಂಚಿಗೆ ಮಳೆ ಸಾವರಿಸಿಕೊಂಡು ಕುಳಿತಿತ್ತು.

ಫ‌ಳಕ್ಕನೆ ಕರೆಂಟು ಬಂತು.

ಅಮ್ಮ ಕರೆಂಟು, ಅಮ್ಮ ಕರೆಂಟು ಅಂತ ಕೂಗುತ್ತಾ ಓಡಿದ ಪುಟ್ಟ.
ಅಮ್ಮ ತನ್ನ ಸಾಯುತ್ತಿರುವ ಮೊಬೈಲ್‌ಗೆ ಚಾರ್ಜರ್‌ನ ತುಟಿ ಕೊಟ್ಟು ಜೀವ ಉಳಿಯುತ್ತದೆಯಾ ಅಂತ ನೋಡಿಕೊಂಡಳು.

ಪುಟ್ಟ ಹಜಾರದಲ್ಲಿ ನೋಡಿದ, ಇನ್ನೂ ಆರದ ತನ್ನ ಪುಟ್ಟ ಪಾದದ ಗುರುತು, ಅಳಿಸಿಯೇ ಹೋಗಿಬಿಡಲಿದ್ದ ಅಮ್ಮ ಪಾದದ ಗುರುತಿನ ಹಿಂದೆ ಹಿಂಬಾಲಿಸಿಕೊಂಡು ಹೊರಟಿತ್ತು.
ಪುಟ್ಟ ಚಪ್ಪಾಳೆ ತಟ್ಟಿ ಖುಷಿಪಟ್ಟ, ಮಳೆತಾಯಿಯ ಹಿಂದೆ ಗುಡುಗು ಶಿಶು ಗುಡುಗುಡು ಗುಡುಗುಡು ಅನ್ನುತ್ತಾ ಓಡಿ ಬರುತ್ತಿದ್ದ ಸದ್ದು ಆಕಾಶದ ಹಜಾರದಲ್ಲಿ ಕೇಳುತ್ತಾ ಕೇಳುತ್ತಾ ಹೋಗುತ್ತಿತ್ತು.

ವಿಕಾಸ್‌ ನೇಗಿಲೋಣಿ

 

Trending videos

 
ಓದುಗರ ಅಭಿಪ್ರಾಯ
Back to Top