Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಒಂದು ಶ್ಯಾಮಲ ಸಂಜೆ

ಒಂದು ಶ್ಯಾಮಲ ಸಂಜೆ
ಶಾಮ ನಿನ್ನದೇ ನೆನಪು...

ಗೋಧೂಳಿ ಸಮಯ
ಆಕಾಶ ಕೆಂಪಾಗಿದೆ ನನ್ನ ಕೆನ್ನೆಗಳೂ
ತಣ್ಣಗಿದೆ ಹವೆ, ನಿನಗೆ ಗೊತ್ತೇ?
ನನ್ನೊಳಗೆ ಸಣ್ಣ ಬಿಸಿ
ಸಂಜೆ ಸಪ್ಪಳಕ್ಕೋ ನಿಧಾನ ಗತಿ ಲಯ
ಇಲ್ಲೋ ಏರುಪೇರು ಹೃದಯ

ಎಲ್ಲಾ ರಾಸಲೀಲೆಗೂ ಹನಿಗಣ್ಣಾಗಿ
ಕಂಬನಿ ಜಿನುಗಿ ಮುಸ್ಸಂಜೆ ಮಬ್ಬಲ್ಲೂ
ಕಾಲಕಾಲಾಂತರದಿಂದ ನಿಂತಂತೆಯೇ
ಹರಿಯುತ್ತಿರುವ ಯಮುನೆ
ಪ್ರೇಮಸಾಕ್ಷಿ

ಕೊಳಲನಿಟ್ಟು ರಾಧೆಯನ್ನಲ್ಲೇ ಬಿಟ್ಟು
ಶಂಖಪಿಡಿದು ಹೊರಟೆ ನೀನು
ಜಗದೋದ್ಧಾರಕ
ರಾಧೆಯ ಅಳಲು ಗೊತ್ತಿದ್ದೇ ಎಲ್ಲರಿಗೂ
ನನಗೆ ನಿನ್ನದೇ ಚಿಂತೆ

ಎದೆಯಲ್ಲಿ ಬಚ್ಚಿಟ್ಟು ಸಣ್ಣದೊಂದು
ವಿರಹ, ನಗುವ ನಗಿಸುವ ನಿನ್ನ
ದಿವ್ಯ ಏಕಾಂತದಲ್ಲಿನ ಬಿಕ್ಕಳಿಕೆ
ಒಮ್ಮೆ ಕಣ್ಣೀರಾಗಿ ಕರಗುವ,
ಕರಗಿ ಒರಗುವ, ಒರಗಿ ಹಗುರಾಗುವ
ಯಾರೂ ನೋಡಿರದ ನಿನ್ನ
ವೇಷ ತೆಗೆದಿಟ್ಟ ಆ ಮುಖವ
ನೋಡಲು ಕಾಯುತ್ತಿದೆ,
ಸಂತೈಸಲು ಕಾಯುತ್ತಿದೆ
ಇದೋ ಶ್ಯಾಮಲ ಸಂಜೆ

ಸಂಜೆಯೊಂದಿಗೆ ಕಾಯುವ
ನಾನೂ...

 

Trending videos

 
ಓದುಗರ ಅಭಿಪ್ರಾಯ
Back to Top