Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಬಿಜೆಪಿ ವಿರುದ್ಧ ನಿಲ್ಲಬೇಕು ಅಂತಿದ್ದರೆ ಡಂಗೂರ ಬಾರಿಸಿಬಿಡ್ತಿದ್ದೆ!

ಬಿಜೆಪಿಯ ಹಿರಿಯ ನಾಯಕ ಶತ್ರುಘ್ನ ಸಿನ್ಹಾ ಪಕ್ಷದ ನಾಯಕತ್ವದ ವಿರುದ್ಧವೇ ತಿರುಗಿ ನಿಂತಿರುವಂತೆ ತೋರಿಸಿಕೊಳ್ಳುತ್ತಿದ್ದಾರೆ. ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವಾಗಲೇ ಅವರು ವಿರೋಧಿ ಪಾಳೆಯದ ನಿತೀಶ್‌ ಕುಮಾರ್‌ರನ್ನು ಹೊಗಳುತ್ತಿದ್ದಾರೆ. ಇದರಿಂದ ಬಿಜೆಪಿಗೆ ಬಿಹಾರದಲ್ಲಿ ನಷ್ಟವಾಗುತ್ತದೆಯೇ? ಇಷ್ಟಕ್ಕೂ ಶತ್ರುಘ್ನಗೆ ಬಿಜೆಪಿ ಮೇಲೆ ಸಿಟ್ಟು ಯಾಕೆ? ಇವುಗಳ ಬಗ್ಗೆ ಎನ್‌ಡಿಟೀವಿ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಪ್ರಶ್ನೆ : ನೀವು ಬಿಜೆಪಿ ಸಂಸದರು. ಆದರೆ ಬಿಜೆಪಿ ವಿರುದ್ಧವೇ ಇತ್ತೀಚೆಗೆ ಬಹಳ ಮಾತಾಡುತ್ತಿದ್ದೀರಿ. ಯಾರ ಮೇಲೆ ಸಿಟ್ಟು?

ಶತ್ರುಘ್ನ ಸಿನ್ಹಾ : ಯಾರ ಮೇಲೂ ಸಿಟ್ಟಿಲ್ಲ. ಆದರೆ, ತಪ್ಪು ಮಾಡುವವರಿಗೆ ಆಗಾಗ ಕನ್ನಡಿ ಹಿಡಿಯುವ ಕೆಲಸ ಮಾಡುತ್ತೇನೆ. ಅದನ್ನು ಬಿಟ್ಟರೆ ನಾನು ಯಾವತ್ತೂ ಪಕ್ಷದ ವಿರುದ್ಧ ಮಾತಾಡಿಲ್ಲ. ಯಾವತ್ತೂ ಪಕ್ಷದ ಲಕ್ಷ್ಮಣ ರೇಖೆ ದಾಟಿಲ್ಲ. ಪಕ್ಷದ ಗಡಿ ದಾಟಬೇಕೋ, ಬೇಡವೋ, ದಾಟಬೇಕಾದರೆ ಯಾವಾಗ ದಾಟಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳುವಷ್ಟು ಪ್ರಬುದ್ಧನಿದ್ದೇನೆ ಹಾಗೂ ಪಕ್ಷದಲ್ಲಿ ಹಿರಿಯನೂ ಇದ್ದೇನೆ.

ಪ್ರಶ್ನೆ : ಆದರೆ, ಜೆಡಿಯು ನಾಯಕ ನಿತೀಶ್‌ ಕುಮಾರ್‌ರನ್ನು ಹೊಗಳುತ್ತೀರಿ. ಆಪ್‌ ನಾಯಕ ಅರವಿಂದ ಕೇಜ್ರಿವಾಲ್‌ರನ್ನು ಭೇಟಿ ಮಾಡುತ್ತೀರಿ. ಅವರೆಲ್ಲ ನಿಮ್ಮ ಪಕ್ಷದ ಅತಿದೊಡ್ಡ ಟೀಕಾಕಾರರು. ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಯಾವ ಸಂದೇಶ ರವಾನಿಸುತ್ತಿದ್ದೀರಿ?

ಶತ್ರುಘ್ನ ಸಿನ್ಹಾ : ಶಿಷ್ಟಾಚಾರ, ಸಂಸ್ಕೃತಿ, ಗೆಳೆತನ, ವೈಯಕ್ತಿಕ ಸಂಬಂಧಗಳನ್ನು ಪಕ್ಷದ ಡೈರಿಯಲ್ಲಿ ಕಟ್ಟಿಹಾಕಲು ಸಾಧ್ಯವಿಲ್ಲ. ನೀವೇ ನೋಡಿದ್ದೀರಿ, ನಮ್ಮ ಗೌರವಾನ್ವಿತ, ಡ್ಯಾಶಿಂಗ್‌, ಡೈನಾಮಿಕ್‌, ಆ್ಯಕ್ಷನ್‌ ಹೀರೋ ಪ್ರಧಾನ ಮಂತ್ರಿಗಳು ಖುದ್ದಾಗಿ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ರ ಮಗಳ ಮದುವೆಗೆ ಹೋಗಿದ್ದರು, ಅವರ ಕೈಹಿಡಿದು ಓಡಾಡಿದ್ದರು, ಲಾಲುಪ್ರಸಾದ್‌ ಯಾದವ್‌ರ ಮಗಳ ಮದುವೆಗೆ ಹೋಗಿದ್ದರು, ಮುಲಾಯಂ ಸಿಂಗ್‌ ಯಾದವ್‌ರ ಮೊಮ್ಮಗಳ ಮದುವೆಗೆ ಹೋಗಿದ್ದರು. ಇವೆಲ್ಲ ಶಿಷ್ಟಾಚಾರ. ನಾನೂ ನಿತೀಶ್‌ರನ್ನು ಈ ಗೆಳೆತನದಲ್ಲೇ ಭೇಟಿ ಮಾಡುತ್ತೇನೆ. ಅವರು ಈ ದೇಶ ಕಂಡ ಅತ್ಯುತ್ತಮ ಮುಖ್ಯಮಂತ್ರಿಗಳಲ್ಲಿ ಒಬ್ಬರು.

ಪ್ರಶ್ನೆ : ಈಗಲೂ ಹೀಗೆ ಹೇಳುತ್ತೀರಾ? ನಿಮ್ಮ ಪಕ್ಷ ಬಿಹಾರದಲ್ಲಿ ನಿತೀಶ್‌ ವಿರುದ್ಧ ಚುನಾವಣೆಯಲ್ಲಿ ಸೆಣಸುತ್ತಿದೆ. ಆದರೆ ನೀವು ವಿರೋಧಿಯನ್ನೇ ಹೊಗಳುತ್ತಿದ್ದೀರಿ?

ಶತ್ರುಘ್ನ ಸಿನ್ಹಾ : ಚುನಾವಣೆಯಲ್ಲಿ ಸೆಣಸುವುದು ಬೇರೆ, ಅವರ ಒಳ್ಳೆಯ ಕೆಲಸಗಳನ್ನು ಮೆಚ್ಚಿಕೊಳ್ಳುವುದು ಬೇರೆ. ನಿತೀಶ್‌ ಒಬ್ಬರೇ ಅಲ್ಲ, ಜಯಲಲಿತಾ ಹಾಗೂ ಶಿವರಾಜ ಸಿಂಗ್‌ ಚೌಹಾಣ್‌ ಕೂಡ ಈ ದೇಶದ ಅತ್ಯುತ್ತಮ ಮುಖ್ಯಮಂತ್ರಿಗಳು. ಲಾಲು ಯಾದವ್‌ ನನಗೆ ಒಳ್ಳೆಯ ಸ್ನೇಹಿತರು. ಹಾಗಂತ ನಾನು ಆರ್‌ಜೆಡಿಗೆ ಹೋಗುತ್ತೇನೆ ಅಥವಾ ಅವರು ಬಿಜೆಪಿಗೆ ಬರುತ್ತಾರೆ ಎಂದರ್ಥವಲ್ಲ. ನಿತೀಶ್‌ ಬಳಿ ನಾನು ಬಿಹಾರದಲ್ಲಿ ಫಿಲ್ಮ್ ಸಿಟಿ ಸ್ಥಾಪಿಸುವ ಬಗ್ಗೆ ಮಾತನಾಡಲು ಹೋಗಿದ್ದೆ. ದೇಶದ ಅಭಿವೃದ್ಧಿಗಾಗಿ ಬಿಹಾರದ ಒಬ್ಬ ಸಂಸದನಾಗಿ ಅಲ್ಲಿನ ಮುಖ್ಯಮಂತ್ರಿ ಜೊತೆ ಮಾತನಾಡುವುದರಲ್ಲಿ ಏನು ತಪ್ಪಿದೆ? ಪುಣೆ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಪರಿಹಾರವಾಗಿ ದೆಹಲಿಯಲ್ಲಿ ಅವರಿಗೆ ಜಾಗ ನೀಡುವ ಬಗ್ಗೆ ಮಾತನಾಡಲು ಕೇಜ್ರಿವಾಲ್‌ ಬಳಿ ಹೋಗಿದ್ದೆ. ಇದರಲ್ಲಿ ರಾಜಕೀಯವೇನೂ ಇಲ್ಲ.

ಪ್ರಶ್ನೆ : ನಿತೀಶ್‌ ಅವರ ಡಿಎನ್‌ಎಯೇ ಸರಿಯಿಲ್ಲ ಎಂದು ಪ್ರಧಾನಿ ಹೇಳಿದ್ದು ವಿವಾದವಾಗಿದೆ. ಇದಕ್ಕೆ ನಿತೀಶ್‌ ಕೂಡ ತಿರುಗೇಟು ನೀಡುತ್ತಿದ್ದಾರೆ. ಪ್ರಧಾನಿಯ ಮಾತು ಒಳ್ಳೆಯ ಅಭಿರುಚಿಯಿಂದ ಕೂಡಿದೆಯೆಂದು ನಿಮಗನ್ನಿಸುತ್ತದೆಯೇ?

ಶತ್ರುಘ್ನ ಸಿನ್ಹಾ : ಮೋದಿ ಅದ್ಭುತ ಮಾತುಗಾರರು. ಭಾಷಣ ಮಾಡುವ ಭರದಲ್ಲಿ ಒಮ್ಮೊಮ್ಮೆ ನಾಯಕರಿಗೆ ಶಬ್ದಗಳ ಕೊರತೆ ಕಾಣಿಸುತ್ತದೆ. ಅಥವಾ ನಾಲಗೆ ಹೊರಳಿಬಿಡುತ್ತದೆ. ಡಿಎನ್‌ಎ ಬಗ್ಗೆ ಮಾತಾಡುವಾಗ ಪ್ರಧಾನಿ ಮನಸ್ಸಿನಲ್ಲಿ ಕೆಟ್ಟ ಉದ್ದೇಶ ಇರಲಿಲ್ಲ ಎಂಬ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ. ಆ ಪದದ ಬಳಕೆಯನ್ನು ಅವರು ತಪ್ಪಿಸಬಹುದಿತ್ತು. ಹಾಗಂತ ಅವರೇನೂ ಕ್ಷಮೆ ಕೇಳುವ ಅಗತ್ಯವಿಲ್ಲ. ಅದೆಲ್ಲ ಈಗ ಹಳೆಯದಾಯಿತು. ಮರೆತುಬಿಡುವುದು ಒಳ್ಳೆಯದು.

ಪ್ರಶ್ನೆ : ಆದರೂ ನೀವು ಮೋದಿಗಿಂತ ಹೆಚ್ಚು ನಿತೀಶ್‌ರನ್ನೇ ಇಷ್ಟಪಡುವಂತೆ ಕಾಣಿಸುತ್ತಿದೆಯಲ್ಲ?

ಶತ್ರುಘ್ನ ಸಿನ್ಹಾ : ಖಂಡಿತ ಇಲ್ಲ. ಅವರಿಗೆ ನಮೋ ಎಂಬ ಹೆಸರು ಕೊಟ್ಟಿದ್ದೇ ನಾನು. ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಎಲ್ಲರಿಗಿಂತ ಮೊದಲು ಘೋಷಿಸಿದ್ದೂ ನಾನೇ. ಅವರು ಈ ದೇಶದ ಆಶೋತ್ತರ ಹಾಗೂ ಅಭಿವೃದ್ಧಿಯ ಪ್ರತೀಕ. ಪ್ರೀತಿಯಿಂದ ನಮೋ ಎಂದು ಕರೆದಿದ್ದೇನೆ. ಬಿಹಾರದಲ್ಲಿ ಸುಶೀಲ್‌ ಮೋದಿಗೆ ಸುಮೋ ಎಂದು ಕರೆಯುತ್ತಿಲ್ಲವೇ, ಹಾಗೆ. ನಾನೊಬ್ಬ ಕಲಾವಿದನಾಗಿರುವುದರಿಂದ ಬಹಳ ಪಕ್ಷಗಳಿಗೆ ನಾನು ಬೇಕಾಗಿರಬಹುದು. ಕಾಂಗ್ರೆಸ್‌, ಕಮ್ಯುನಿಸ್ಟ್‌ ಹೀಗೆ ಅನೇಕ ಪಕ್ಷಗಳು ನನ್ನನ್ನು ಬಯಸುತ್ತವೆ. ಎಲ್ಲ ಪಕ್ಷದಲ್ಲೂ ನನಗೆ ಸ್ನೇಹಿತರಿದ್ದಾರೆ. ಅದರರ್ಥ ಅವರ ಪಕ್ಷಕ್ಕೆ ನಾನು ಹೋಗುತ್ತೇನೆ ಎಂದಲ್ಲ. ನಾನು ಜಯಪ್ರಕಾಶ್‌ ನಾರಾಯಣ್‌, ನಾನಾಜಿ ದೇಶಮುಖ್‌, ವಾಜಪೇಯಿ, ಅಡ್ವಾಣಿಯವರಿಂದ ಪ್ರಭಾವಿತನಾಗಿ ರಾಜಕೀಯಕ್ಕೆ ಬಂದವನು. ಸಂಸತ್ತಿನಲ್ಲಿ ಜನಸಂಘಕ್ಕೆ 2 ಸೀಟು ಇದ್ದಾಗಿನಿಂದ ಈ ಪಕ್ಷದಲ್ಲಿದ್ದೇನೆ. ಸಿನಿಮಾ ಕ್ಷೇತ್ರದಿಂದ ಬಂದು ದೇಶದ ಸಂಪುಟ ದರ್ಜೆಯ ಸಚಿವನಾದ ಮೊದಲ ವ್ಯಕ್ತಿ ಎಂಬ ದಾಖಲೆ ನನ್ನ ಹೆಸರಲ್ಲಿದೆ.

ಪ್ರಶ್ನೆ : ವಾಜಪೇಯಿಯವರ ಸಂಪುಟದಲ್ಲೇ ಸಚಿವನಾಗಿದ್ದ ನನ್ನನ್ನು ಮೋದಿ ಕಡೆಗಣಿಸಿದ್ದಾರೆ, ಮಂತ್ರಿ ಮಾಡಿಲ್ಲ ಎಂಬ ಕಾರಣಕ್ಕೇ ನಿಮಗೆ ಸಿಟ್ಟು ಎಂದು ಬಿಜೆಪಿಯವರು ಹೇಳುತ್ತಾರಲ್ಲ?

ಶತ್ರುಘ್ನ ಸಿನ್ಹಾ : ಶುದ್ಧ ಸುಳ್ಳು. ಇಂತಹ ಸುದ್ದಿ ಹರಿಬಿಡುವವರು ಯಾರೆಂದು ನನಗೆ ಗೊತ್ತು. ಯಾರನ್ನಾದರೂ ಮಂತ್ರಿ ಮಾಡುವುದು ಅಥವಾ ಬಿಡುವುದು ಪ್ರಧಾನಿಯ ವಿಶೇಷಾಧಿಕಾರ. ನನಗೆ ಅದರ ಬಗ್ಗೆ ಯಾವುದೇ ಬೇಸರವಿಲ್ಲ. ಆದರೆ, ನನ್ನ ಬೆಂಬಲಿಗರಿಗೆ ಬೇಸರವಿದೆ. ಅವರಿಗೆಲ್ಲ ಸಮಾಧಾನ ಮಾಡಿ ಅಚ್ಛೇ ದಿನ್‌ ಬರುತ್ತದೆ ಎಂದು ಹೇಳಿದ್ದೇನೆ.

ಪ್ರಶ್ನೆ : ನೀವು ಅಡ್ವಾಣಿಯವರ ಟೀಮ್‌ನಲ್ಲಿದ್ದೀರಿ ಎಂಬ ಕಾರಣಕ್ಕೆ ನಿಮ್ಮನ್ನು ಕಡೆಗಣಿಸಲಾಗಿದೆಯೇ?

ಶತ್ರುಘ್ನ ಸಿನ್ಹಾ : ನಿಜವಾಗಿಯೂ ಗೊತ್ತಿಲ್ಲ. ಒಂದು ವೇಳೆ ಅದೇ ನಿಜವಾಗಿದ್ದರೂ ನಾನು ಪ್ರಧಾನಿಗಿರುವ ಆಯ್ಕೆ ಸ್ವಾತಂತ್ರ್ಯವನ್ನು ಪ್ರಶ್ನಿಸುವುದಿಲ್ಲ. ಮೇಲಾಗಿ, ನಮ್ಮ ಸರ್ಕಾರಕ್ಕೆ ಇನ್ನೂ ಎರಡು ವರ್ಷ ಕೂಡ ಆಗಿಲ್ಲ. ಮುಂದೆ ಏನು ಬೇಕಾದರೂ ಆಗಬಹುದು. ಮಂತ್ರಿಯಾಗುವುದು ನನಗೇನೂ ಕಷ್ಟದ ಕೆಲಸವಲ್ಲ.

ಪ್ರಶ್ನೆ : ಬಿಹಾರದಲ್ಲಿ ಪ್ರಧಾನಿ ಮೋದಿ ನಡೆಸಿದ ರ್ಯಾಲಿಗಳಿಗೆ ನೀವೇಕೆ ಹೋಗಿಲ್ಲ?

ಶತ್ರುಘ್ನ ಸಿನ್ಹಾ : ಕರೆದ ಕಡೆಗೆಲ್ಲ ಹೋಗಿದ್ದೇನೆ. ಪಟ್ನಾ ರ್ಯಾಲಿಗೆ ಕರೆದಿದ್ದರು, ಹೋಗಿದ್ದೇನೆ. ನಂತರ ಪಟ್ನಾದಲ್ಲೇ ನಡೆದ ಇನ್ನೊಂದು ರ್ಯಾಲಿಗೆ ಕರೆಯಲಿಲ್ಲ, ಹಾಗಾಗಿ ಹೋಗಲಿಲ್ಲ. ಮುಜಫ‌ರ್‌ಪುರ ರ್ಯಾಲಿಗೆ, ಗಯಾ, ಭಾಗಲ್ಪುರ ಇತ್ಯಾದಿ ರ್ಯಾಲಿಗಳಿಗೆ ಕರೆಯಲಿಲ್ಲ, ಹಾಗಾಗಿ ಹೋಗಲಿಲ್ಲ. ಕರೆಯದೆ ಹೋಗಿ ಸಂಘರ್ಷಕ್ಕೆ ಕಾರಣವಾಗುವುದು, ಸೀನ್‌ ಕ್ರಿಯೇಟ್‌ ಮಾಡುವುದು ನನಗೆ ಇಷ್ಟವಿಲ್ಲ. ಪಕ್ಷದ ವಿರುದ್ಧ ತಿರುಗಿ ನಿಲ್ಲಬೇಕು ಅಂತಿದ್ದರೆ ಇಷ್ಟೊತ್ತಿಗೆ ಡಂಗೂರ ಬಾರಿಸಿಬಿಡುತ್ತಿದ್ದೆ. ಅದು ನನ್ನ ನಿಯತ್ತಲ್ಲ.

ಪ್ರಶ್ನೆ : ನೀವೇಕೆ ಬಿಹಾರದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಜೆಪಿ ನಾಯಕನ ಹೆಸರು ಸೂಚಿಸದೆ ಎಲ್‌ಜೆಪಿಯ ರಾಮ್‌ವಿಲಾಸ್‌ ಪಾಸ್ವಾನ್‌ರ ಹೆಸರು ಸೂಚಿಸಿದಿರಿ?

ಶತ್ರುಘ್ನ ಸಿನ್ಹಾ : ಮೊದಲು ಬಿಜೆಪಿ ನಾಯಕನ ಹೆಸರನ್ನೇ ಸೂಚಿಸಿದ್ದೆ. ಆದರೆ, ನಮ್ಮ ಪಕ್ಷದವರು ಯಾರನ್ನೂ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿ ಚುನಾವಣೆಗೆ ಹೋಗಲು ಸಿದ್ಧರಿರಲಿಲ್ಲ. ಆದರೆ, ಜನರಿಗೆ ಚುನಾವಣೆಗೂ ಮುನ್ನ ಒಂದು ಮುಖ ಬೇಕು. ಹಾಗಾಗಿ ಬಿಜೆಪಿಯಿಂದ ಯಾರನ್ನೂ ಸೂಚಿಸಲು ಸಾಧ್ಯವಿಲ್ಲ ಎಂದಾದರೆ ಪಾಸ್ವಾನ್‌ರನ್ನು ಮಾಡಿ ಎಂದು ಹೇಳಿದ್ದೆ.

ಪ್ರಶ್ನೆ : ನಿಮಗೆ ಬಿಹಾರದ ಮುಖ್ಯಮಂತ್ರಿಯಾಗುವ ಆಸೆಯಿದೆಯೇ?

ಶತ್ರುಘ್ನ ಸಿನ್ಹಾ : ನನಗೆ ಮುಖ್ಯಮಂತ್ರಿಯಾಗುವ ಇಚ್ಛೆಯೂ ಇಲ್ಲ, ಅಪೇಕ್ಷೆಯೂ ಇಲ್ಲ, ಅದಕ್ಕೆ ನನ್ನ ಬಳಿ ಸಮಯವೂ ಇಲ್ಲ.

ಪ್ರಶ್ನೆ : ನಾನಂತೂ ಪಕ್ಷ ಬಿಡುವುದಿಲ್ಲ, ಪಕ್ಷದಿಂದ ಹೊರಹಾಕುವುದಾದರೆ ಬಿಜೆಪಿ ನಾಯಕರೇ ಹೊರಹಾಕಲಿ ಎಂದು ಬೇಕಂತಲೇ ನೀವು ಅವರನ್ನು ಕೆಣಕುತ್ತಿದ್ದೀರಾ? ಬಿಹಾರ ಚುನಾವಣೆಯ ನಂತರ ನಿಮ್ಮನ್ನು ಪಕ್ಷದಿಂದ ವಜಾಗೊಳಿಸುತ್ತಾರೆ ಎಂಬ ವದಂತಿಯೂ ಇದೆ.

ಶತ್ರುಘ್ನ ಸಿನ್ಹಾ : ಈ ಸುದ್ದಿಯನ್ನು ಯಾರು ಹರಡುತ್ತಿದ್ದಾರೆಂಬುದೂ ನನಗೆ ಗೊತ್ತು. ಈಗಲೇ ಹೊರಹಾಕದೆ ಚುನಾವಣೆ ನಂತರ ನನ್ನನ್ನು ಹೊರಹಾಕುತ್ತಾರೆ ಎಂದಾದರೆ ಅದು ಪಕ್ಷದ ನಾಯಕತ್ವ ತನ್ನ ದೌರ್ಬಲ್ಯವನ್ನು ಎಲ್ಲರೆದುರು ಪ್ರದರ್ಶಿಸಿದಂತಾಗುತ್ತದೆ. ಇದೆಲ್ಲ ಸುಳ್ಳು. ಪಕ್ಷದಿಂದ ನನ್ನನ್ನು ಹೊರಹಾಕುವ ಅಧಿಕಾರವುಳ್ಳ ಯಾವ ನಾಯಕರೂ ಇಂತಹ ಮಾತನಾಡಿಲ್ಲ.
 

 

Trending videos

 
ಓದುಗರ ಅಭಿಪ್ರಾಯ
Back to Top