Updated at Tue,6th Sep, 2016 12:36PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ದಿಗಂತ್‌-ಕೃತಿ ಮಿಂಚಿಂಗ್‌ ಸ್ಟೋರಿ

ದಿಗಂತ್‌ ಹಾಗೂ ಕೃತಿ ಕರಬಂದ ಈ ಹಿಂದೆ ಅನೇಕ ಜಾಹೀರಾತುಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಅದೆಷ್ಟೋ ಮಂದಿ ಮಾಡೆಲ್ಸ್‌ ಇದ್ದರೂ ದಿಗಂತ್‌ಗೆ ಕೃತಿಯನ್ನೇ ಜೋಡಿ ಮಾಡುತ್ತಿದ್ದರಂತೆ. ಆದರೆ ಸಿನಿಮಾದಲ್ಲಿ ಮಾತ್ರ ಇಬ್ಬರಿಗೂ ಜೊತೆಯಾಗಿ ನಟಿಸುವ ಅವಕಾಶ ಸಿಕ್ಕಿರಲಿಲ್ಲ. ಈಗ ಆ ಅವಕಾಶ ಸಿಕ್ಕಿದೆ. ಸಿಕ್ಕಿರುವುದಷ್ಟೇ ಅಲ್ಲ, ಸಿನಿಮಾ ಬಿಡುಗಡೆಯ ಹಂತಕ್ಕೂ ಬಂದಿದೆ. ಅದು "ಮಿಂಚಾಗಿ ನೀ ಬರಲು' ಚಿತ್ರ. ಎರಡು ವರ್ಷಗಳ ಹಿಂದೆ ಸದ್ದಿಲ್ಲದೇ ಆರಂಭವಾದ ಚಿತ್ರದ ಹಾಡುಗಳು ಈಗ ಬಿಡುಗಡೆಯಾಗಿವೆ. ಚಿತ್ರವನ್ನು ರಣದೀಪ್‌ ಶಾಂತಾರಾಮ್‌ ಮಹಾದಿಕ್‌ ನಿರ್ದೇಶಿಸಿದ್ದಾರೆ. ತಮ್ಮ ಇಬ್ಬರು ಸ್ನೇಹಿತರಾದ ಮಹೇಶ್‌ ತಲಕಾಡು ಹಾಗೂ ಮಹೇಶ್‌ ಜೆಸ್ವಾಲ್‌ ಜೊತೆ ಸೇರಿ ಚಿತ್ರ ನಿರ್ಮಿಸುವಲ್ಲೂ ಮಹಾದಿಕ್‌ ಜೈ ಜೋಡಿಸಿದ್ದಾರೆ.

ವಿಶೇಷವೆಂದರೆ ಈ ಮೂವರು ಮುಂಬೈನಲ್ಲಿ ಫ್ರೆಂಡ್ಸ್‌ ಆದವರು. ಮೂಲತಃ ಮೈಸೂರಿನ ರಣದೀಪ್‌ ಮಹಾದಿಕ್‌ ಹಾಗೂ ಮಹೇಶ್‌ ತಲಕಾಡು ಮುಂಬೈನಲ್ಲಿ ಅನೇಕ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ. ಹೀಗೆ ಕೆಲಸ ಮಾಡುತ್ತಿರುವಾಗಲೇ ರಣದೀಪ್‌ಗೆ ಸಿನಿಮಾ ಮಾಡುವ ಆಸೆಯಾಗಿ ಕಥೆ ರೆಡಿಮಾಡಿಕೊಂಡು, ಮಹೇಶ್‌ ತಲಕಾಡುಗೆ ಹೇಳುತ್ತಾರೆ. ಸಾವಿರಾರು ಕಥೆಗಳನ್ನು ಕೇಳಿರುವ ಮಹೇಶ್‌ ತಲಕಾಡುಗೆ ರಣದೀಪ್‌ ಕಥೆಯಲ್ಲಿ ಏನೋ ಹೊಸತನ ಕಾಣಿಸಿ, ಸಿನಿಮಾ ಮಾಡಬಹುದು ಎಂದು ಗ್ರೀನ್‌ಸಿಗ್ನಲ್‌ ಕೊಡುತ್ತಾರೆ ಕೂಡಾ. ಅಂದಹಾಗೆ, ರಣಬೀರ್‌ ಕಪೂರ್‌ ಹಾಗೂ ಪ್ರಿಯಾಂಕಾ ಚೋಪ್ರಾಗೆ ಈ ಸಿನಿಮಾ ಮಾಡಬೇಕೆಂಬ ಐಡಿಯಾ ರಣದೀಪ್‌ ಅವರದು. ಆದರೆ, ಆ ಅವಕಾಶ ಸದ್ಯಕ್ಕೆ ಸಿಗಲ್ಲ ಎಂಬ ಕಾರಣಕ್ಕೆ ಕನ್ನಡದಲ್ಲಿ ದಿಗಂತ್‌ ಹಾಗೂ ಕೃತಿಗೆ ಈ ಸಿನಿಮಾ ಮಾಡಿದ್ದಾರೆ. ಚಿತ್ರ ಇಲ್ಲಿ ಗೆದ್ದರೆ ಮುಂದೆ ಹಿಂದಿಯಲ್ಲೂ ಮಾಡುವ ಯೋಚನೆ ಚಿತ್ರತಂಡಕ್ಕಿದೆ.

"ಮಿಂಚಾಗಿ ನೀನು ಬರಲು' ಔಟ್‌ ಅಂಡ್‌ ಔಟ್‌ ಲವ್‌ಸ್ಟೋರಿ. ನಾಯಕ ಉರಿಬಿಸಿಲಿನಲ್ಲಿ ನಾಯಕಿಗಾಗಿ ಕಾಯುತ್ತಿದ್ದರೆ ನಾಯಕಿ ಮಳೆಯಲ್ಲಿ ನಾಯಕನಿಗಾಗಿ ಕಾಯುತ್ತಿರುತ್ತಾಳಂತೆ. ಸಾಕಷ್ಟು ಟ್ವಿಸ್ಟ್‌ಗಳೊಂದಿಗೆ ಸಿನಿಮಾ ಮಾಡಿದ್ದಾಗಿ ಹೇಳುತ್ತಾರೆ ನಿರ್ದೇಶಕ ರಣದೀಪ್‌. ಲವ್‌ಸ್ಟೋರಿ ಎಂದಮೇಲೆ ಸಕಲೇಶಪುರ, ಮಡಿಕೇರಿ ಹಾಗೂ ಚಿಕ್ಕಮಗಳೂರಿನ ಲೊಕೇಶನ್‌ಗಳು ಇರಲೇಬೇಕು. ಹಾಗಾಗಿ, "ಮಿಂಚಾಗಿ ನೀನು ಬರಲು' ಚಿತ್ರದಲ್ಲೂ ಆ ಲೊಕೇಶನ್‌ಗಳನ್ನು ಚೆನ್ನಾಗಿಯೇ ಬಳಸಿಕೊಳ್ಳಲಾಗಿದೆಯಂತೆ. ಚಿತ್ರಕ್ಕೆ ಕ್ಯಾಮರಾ ಹಿಡಿದಿರುವುದು ನಿರ್ಮಾಪಕರಲ್ಲೊಬ್ಬರಾದ ಮಹೇಶ್‌ ತಲಕಾಡು. ಈಗ ನಿರ್ಮಾಣದ ಜೊತೆಗೆ ಛಾಯಾಗ್ರಹಣ ಕೂಡಾ ಮಾಡಿದ್ದಾರೆ. ಗೆಳೆಯ ರಣದೀಪ್‌ ಮಾಡಿದ ಕಥೆ ತುಂಬಾ ಫ್ರೆಶ್‌ ಆಗಿದ್ದರಿಂದ ತಂಡವನ್ನು ಸೇರಿಕೊಂಡಿದ್ದಾಗಿ ಹೇಳುತ್ತಾರೆ.

ನಾಯಕ ದಿಗಂತ್‌ ಈ ಸಿನಿಮಾ ಮೇಲೆ ತುಂಬಾ ಭರವಸೆ ಇಟ್ಟಿದ್ದಾರೆ. ಕಾರಣ ಕಥೆ. ಈ ಸಿನಿಮಾದ ಕಥೆ ಕೇಳಿ ಮುಗಿಸುವ ಹೊತ್ತಿಗೆ ಯಾವತ್ತಿಂದ ಶೂಟಿಂಗ್‌ ಎಂದು ಕೇಳಿದರಂತೆ. ನಾಯಕಿಯ ವಿಷಯ ಬಂದಾಗ ಕೃತಿ ಕರಬಂಧನನ್ನು ಸೂಚಿಸಿದ್ದು ಕೂಡಾ ದಿಗಂತ್‌ ಎಂಬುದು ನಿಮಗೆ ಗೊತ್ತಿರಲಿ. "ಹಿಂದೆ ನಾನು ಕೃತಿ ಅನೇಕ ಜಾಹೀರಾತುಗಳಲ್ಲಿ ಜೊತೆಯಾಗಿ ನಟಿಸಿದ್ದೇವೆ. ಬೇರೆ ಎಷ್ಟೇ ಮಾಡೆಲ್‌ಗ‌ಳಿದ್ದರೂ ನನ್ನ ಹಾಗೂ ಕೃತಿಯನ್ನೇ ಜೋಡಿ ಮಾಡುತ್ತಿದ್ದರು. ಕೆಮಿಸ್ಟ್ರಿ ಚೆನ್ನಾಗಿ ವಕೌìಟ್‌ ಆಗಿತ್ತು. ಎಂಬುದು ದಿಗಂತ್‌ ಮಾತು. ನಾಯಕಿ ಕೃತಿಗೆ ಈ ಸಿನಿಮಾ ಒಂದು ಎಮೋಶನಲ್‌ ಜರ್ನಿಯಂತೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದು, ಡಿ ಬೀಟ್ಸ್‌ ಹಾಡು ಗಳನ್ನು ಬಿಡುಗಡೆ ಮಾಡಿದೆ.

 

Trending videos

 
ಓದುಗರ ಅಭಿಪ್ರಾಯ
Back to Top