Updated at Tue,6th Sep, 2016 12:36PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಅಭಿಮಾನಿ ಅಂತ್ಯಕ್ರಿಯೆಯಲ್ಲಿ ದುನಿಯಾ ವಿಜಯ್‌

ದುನಿಯಾ ವಿಜಯ್‌ ಸೋಮವಾರ ಭಾವುಕರಾಗಿದ್ದರು. ಅದು ಅವರ ಕಟ್ಟಾ ಅಭಿಮಾನಿ ಆಂಟೋನಿರಾಜ್‌ (22) ಅಂತ್ಯಕ್ರಿಯೆ ವೇಳೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆಂಟೋನಿರಾಜ್‌, ಚಿಕಿತ್ಸೆ ಫ‌ಲಕಾರಿಯಾಗದೆ ಭಾನುವಾರ ನಿಧನರಾಗಿದ್ದರು. ಸೋಮವಾರ ಬೆಳಗ್ಗೆ ಸುಮಾರು 11 ಗಂಟೆ ಹೊತ್ತಿಗೆ ಮೃತ ಆಂಟೋನಿರಾಜ್‌ ಅವರ ಹೊಸಗುಡದಹಳ್ಳಿ ಮನೆಗೆ ತೆರಳಿದ ದುನಿಯಾ ವಿಜಯ್‌, ಆಂಟೋನಿರಾಜ್‌ ಮೃತದೇಹದ ಮುಂದೆ ನಿಂತು ಕ್ಷಣಕ್ಷಣ ಭಾವುಕರಾದರು. ಬಳಿಕ ಆಂಟೋನಿರಾಜ್‌ ಗೆಳೆಯರ ಜತೆಗೆ ಶವವನ್ನು ಸ್ವಲ್ಪ ದೂರದವರೆಗೆ ಹೊತ್ತು ಅಂತ್ಯಕ್ರಿಯೆ ಮುಗಿಯುವವರೆಗೂ ಸ್ಥಳದಲ್ಲಿದ್ದರು. ಮೈಸೂರು ರಸ್ತೆಯಲ್ಲಿರುವ ಸ್ಮಶಾನದಲ್ಲಿ ಆಂಟೋನಿರಾಜ್‌ ಅವರ ಅಂತ್ಯಕ್ರಿಯೆ ಕುಟುಂಬ ವರ್ಗ ಹಾಗು ಅಪಾರ ಗೆಳೆಯರ ನಡುವೆ ನೆರವೇರಿಸಲಾಯಿತು.

ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ದುನಿಯಾ ವಿಜಯ್‌, "ಉದಯವಾಣಿ' ಜತೆ ಮಾತನಾಡಿ, "ನನಗೆ ನನ್ನ ಪ್ರೀತಿಯ ತಮ್ಮನೊಬ್ಬನನ್ನು ಕಳೆದುಕೊಂಡಂತಹ ನೋವಾಗುತ್ತಿದೆ. ಆಂಟೋನಿರಾಜ್‌ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೂ ದೇವರು ದುಃಖ ಭರಿಸುವ ಶಕ್ತಿ ನೀಡಲಿ. ನನಗೊಬ್ಬ ಅಂತಹ ಒಳ್ಳೆಯ ಅಭಿಮಾನಿ ಇದ್ದ. ಈಗ ಅವನನ್ನು ಕಳೆದುಕೊಂಡಿದ್ದೇನೆ. ನನ್ನ ಫೋಟೋಗಳನ್ನೆಲ್ಲಾ ಮನೆಯಲ್ಲಿ ಹಾಕಿಕೊಂಡು, ನನ್ನಂತೆಯೇ ಸ್ಟಂಟ್‌ ಮಾಡುತ್ತಿದ್ದ. ನನ್ನ ಎಲ್ಲಾ ಚಿತ್ರಗಳನ್ನು ವೀಕ್ಷಿಸಿ ಸಂಭ್ರಮಿಸುತ್ತಿದ್ದ, ಅಂತಹ ಅಭಿಮಾನಿಗೆ ಕ್ಯಾನ್ಸರ್‌ ಇತ್ತು ಎಂಬುದನ್ನು ಖಾಸಗಿ ವಾಹಿನಿಯಲ್ಲಿ ತಿಳಿದುಕೊಂಡೆ. ಆಗ ಆಂಟೋನಿಯನ್ನು ಭೇಟಿ ಮಾಡಿ, ಸಮಾಧಾನ ಪಡಿಸಿದ್ದೆ. ಅವನ ಕೊನೆ ಆಸೆ, ನನ್ನ "ಆರ್‌ಎಕ್ಸ್‌ ಸೂರಿ' ಚಿತ್ರ ನೋಡುವುದಾಗಿತ್ತು. ಅದನ್ನೂ ಸಹ ಚಿತ್ರತಂಡ ಈಡೇರಿಸಿತ್ತು. ಕ್ಯಾನ್ಸರ್‌ ಕೊನೆಯ ಹಂತಕ್ಕೆ ಬಂದಿತ್ತು. ಆದರೆ, ಅವನನ್ನು ಉಳಿಸಿಕೊಳ್ಳಲಾಗಲಿಲ್ಲ ಎಂಬ ದುಃಖವಿದೆ. ಇಷ್ಟರಲ್ಲೇ ಆಂಟೋನಿ ತಾಯಿ ಅವರನ್ನು ಸಂಪರ್ಕಿಸುತ್ತೇನೆ' ಎಂದಷ್ಟೇ ವಿಜಯ್‌ ಹೇಳಿದರು.

 

Trending videos

 
ಓದುಗರ ಅಭಿಪ್ರಾಯ
Back to Top