Updated at Tue,6th Sep, 2016 12:36PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮುಂದಿನ ತಿಂಗಳು ಡವ್‌ ತೆರೆಗೆ

ಅನೂಪ್‌ ಸಾ.ರಾ.ಗೋವಿಂದು "ಡವ್‌' ಎಂಬ ಚಿತ್ರದ ಮೂಲಕ ಹೀರೋ ಆಗಿ ಪರಿಚಯವಾಗಿದ್ದು ನಿಮಗೆ ಗೊತ್ತಿರಬಹುದು. ಬಿ.ಕೆ. ಶ್ರೀನಿವಾಸ್‌ ಈ ಚಿತ್ರದ ನಿರ್ಮಾಪಕರು. ಈಗ ಚಿತ್ರವನ್ನು ಬಿಡುಗಡೆ ಮಾಡಲು ಶ್ರೀನಿವಾಸ್‌ ಮುಂದಾಗಿದ್ದಾರೆ. ಸಿನಿಮಾ ತಡವಾದರೂ ಚೆನ್ನಾಗಿ ಮೂಡಿಬಂದ ಖುಷಿ ಶ್ರೀನಿವಾಸ್‌ ಅವರಿಗಿದೆ.

"ಅನೂಪ್‌ ಸಾ.ರಾ.ಗೋವಿಂದು ತುಂಬಾ ಚೆನ್ನಾಗಿ ನಟಿಸಿದ್ದಾರೆ. ಮುಂದೆ ಅವರಿಗೆ ಒಳ್ಳೆಯ ಭವಿಷ್ಯವಿದೆ. ಹೊಸ ಹುಡುಗನನ್ನು ಎಲ್ಲರೂ ಪ್ರೋತ್ಸಾಹಿಸಿ' ಎಂದು ಕೇಳಿಕೊಳ್ಳುತ್ತಾರೆ ಶ್ರೀನಿವಾಸ್‌. ಚಿತ್ರ ಅಕ್ಟೋಬರ್‌ 9ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಆರ್‌.ಎಸ್‌.ಪ್ರೊಡಕ್ಷನ್‌ ಕನಕಪುರ ಶ್ರೀನಿವಾಸ್‌ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. "ಶ್ರೀನಿವಾಸ್‌ ಅವರು ಚಿತ್ರ ನೋಡಿ ಖುಷಿಪಟ್ಟಿದ್ದಾರೆ. ರಾಜ್ಯಾದ್ಯಂತ ವಿತರಣೆ ಕೂಡಾ ಮಾಡುತ್ತಿದ್ದಾರೆ. ನಮ್ಮ ಸಂಸ್ಥೆಯ ಚಿತ್ರ ಬಿಡುಗಡೆ ಯಾವತ್ತೂ ಅದ್ಧೂರಿಯಾಗಿರುತ್ತದೆ. ಅದೇ ರೀತಿ "ಡವ್‌' ಚಿತ್ರವನ್ನು ಕೂಡಾ ತುಂಬಾ ಆದ್ಧೂರಿಯಾಗಿಯೇ ಬಿಡುಗಡೆ ಮಾಡುತ್ತಿದ್ದೇನೆ' ಎಂಬುದು ಶ್ರೀನಿವಾಸ್‌ ಮಾತು. ಕನ್ನಡ ಸೇರಿದಂತೆ ಪರಭಾಷೆಯ ಸ್ಟಾರ್‌ಗಳ ಹಾಗೂ ನಿರೀಕ್ಷಿತ ಸಿನಿಮಾಗಳ ವಿತರಣೆ ಮಾಡುತ್ತಿರುವ ಕನಕಪುರ ಶ್ರೀನಿವಾಸ್‌ ಅವರನ್ನು "ಟೈಗರ್‌ ಶ್ರೀನಿವಾಸ್‌' ಎಂದು ಕರೆಯುವ ಮೂಲಕ ಅವರಿಗೆ ಹೊಸ ಬಿರುದನ್ನು ಕೂಡಾ ಕೊಟ್ಟರು ಬಿ.ಕೆ.ಶ್ರೀನಿವಾಸ್‌.

ಚಿತ್ರತಂಡಕ್ಕೆ ಶುಭಕೋರಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್‌ ಡಿಸೋಜಾ, ನಿರ್ಮಾಪಕ ಉಮೇಶ್‌ ಬಣಕಾರ್‌ ಕೂಡಾ ಬಂದಿದ್ದರು. ಅವರು ಕೂಡಾ ಶ್ರೀನಿವಾಸ್‌ ಅವರ ಸಿನಿಮಾ ಪ್ರೀತಿಯ ಬಗ್ಗೆ ಮಾತನಾಡಿದರು. ಜೊತೆಗೆ ನವನಾಯಕ ಅನೂಪ್‌ಗೆ ಶುಭ ಕೋರಿದರು. ಸ್ಯಾನ್‌ಸಿಟಿಯ ವಿಶ್ವಕಾರ್ಯಪ್ಪ, ಕುಮಾರ್‌ ಗೋವಿಂದು, ಕರಿಸುಬ್ಬು ಕೂಡಾ ಸಿನಿಮಾ ಬಗ್ಗೆ ಮಾತನಾಡುವ ಜೊತೆಗೆ ಚಿತ್ರ ಯಶಸ್ಸು ಕಾಣಲಿ ಎಂದು ಹಾರೈಸಿದರು.

ಮಗನ ಚಿತ್ರದ ಬಗ್ಗೆ ಸಾ.ರಾ.ಗೋವಿಂದು ಕೂಡಾ ಮಾತನಾಡಿದರು. "ಚಿತ್ರ ಸ್ವಲ್ಪ ತಡವಾದರೂ ತುಂಬಾ ಚೆನ್ನಾಗಿ ಮೂಡಿಬಂದಿದೆ. ಶ್ರೀನಿವಾಸ್‌ ನಿರ್ಮಾಣ ಎಂದಮೇಲೆ ಅಲ್ಲಿ ಅದ್ಧೂರಿತನ ಇದ್ದೇ ಇರುತ್ತದೆ. ಅದು "ಡವ್‌' ಚಿತ್ರದಲ್ಲೂ ಮುಂದುವರಿದಿದೆ. ಮೊದಲ ಚಿತ್ರವಾದ್ದರಿಂದ ಸಣ್ಣಪುಟ್ಟ ತಪ್ಪುಗಳು ಸಹಜ. ಹಾಗೇನಾದರೂ ಅನೂಪ್‌ನಲ್ಲಿ ತಪ್ಪು ಕಂಡುಬಂದರೆ ತಿದ್ದಿ-ತೀಡಿ ಪ್ರೋತ್ಸಾಹಿಸಿ' ಎಂದರು. ಇನ್ನು, ಚಿತ್ರದ ವಿತರಣೆಯ ಹಕ್ಕು ಪಡೆದಿರುವ ಶ್ರೀನಿವಾಸ್‌ ಬಗ್ಗೆ ಮಾತನಾಡುತ್ತಾ, "ನಾವು ಕೇಳಿಕೊಂಡ ತಕ್ಷಣ ವಿತರಣೆ ಮಾಡಲು ಮುಂದಾದರು. ಅವರ ಪ್ರೋತ್ಸಾಹ ನಿರಂತರವಾಗಿರಲಿ' ಎಂದರು ಸಾ.ರಾ.ಗೋವಿಂದು.

ನಾಯಕ ಅನೂಪ್‌ಗೆ ಇದೊಂದು ಒಳ್ಳೆಯ ಅನುಭವವಂತೆ. ಮೊದಲ ಸಿನಿಮಾದಲ್ಲೇ ಒಳ್ಳೆಯ ತಂಡದೊಂದಿಗೆ ಕೆಲಸ ಮಾಡಿದ ಖುಷಿ ಇದೆಯಂತೆ. "ಮೊದಲ ಸಿನಿಮಾದಲ್ಲಿ ಇಂತಹ ತಂಡ ಸಿಕ್ಕಿರುವುದು ನನ್ನ ಅದೃಷ್ಟ. ಒಳ್ಳೆಯ ಬ್ಯಾನರ್‌ ಮೂಲಕ ಲಾಂಚ್‌ ಆಗುತ್ತಿರುವ ಖುಷಿ ಇದೆ. ಸಿನಿಮಾ ಆರಂಭವಾಗುವ ಮುಂಚೆ ಸಾಕಷ್ಟು ತರಬೇತಿ ಪಡೆದಿದ್ದರಿಂದ ಸೆಟ್‌ನಲ್ಲಿ ಸುಲಭವಾಗಿ ನಟಿಸಲು ಸಾಧ್ಯವಾಯಿತು' ಎಂಬುದು ಅನೂಪ್‌ ಮಾತು. ನಾಯಕಿ ಅದಿತಿ ಕೂಡಾ "ಡವ್‌' ಚಿತ್ರದ ತಮ್ಮ ಅನುಭವ ಹಂಚಿಕೊಂಡರು. ನಿರ್ದೇಶಕ ಸಂತು, "ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಅನೂಪ್‌ ಕೂಡಾ ಅನುಭವಿ ನಟರಂತೆ ನಟಿಸಿದ್ದಾರೆ. ನಿರ್ಮಾಪಕರು ಚಿತ್ರಕ್ಕೆ ಬೇಕಾಗಿದ್ದೆಲ್ಲವನ್ನು ಒದಗಿಸಿದ್ದಾರೆ' ಎಂದರು.

 

Trending videos

 
ಓದುಗರ ಅಭಿಪ್ರಾಯ
Back to Top