Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಶಿಕ್ಷಣ ಮುಖ್ಯವಲ್ಲ, ಸಂಪಾದನೆ ಮುಖ್ಯ ಎಂಬ ಆಧುನಿಕ ಭ್ರಮೆ

ಮಗುವಿಗೆ 3 ವರ್ಷವಾದ ತಕ್ಷಣ ತಂದೆ-ತಾಯಿ ಅದನ್ನು ಶಿಶುವಿಹಾರಕ್ಕೆ ಕಳಿಸುತ್ತಾರೆ. ಮೊದಲ ದಿನ ಅದು ಶಾಲೆಗೆ ಹೋಗುವಾಗ ಕೆಲ ಅಪ್ಪ ಅಮ್ಮಂದಿರಿಗೆ ಸಂಕಟ, ಇನ್ನು ಕೆಲ ಅಪ್ಪ ಅಮ್ಮಂದಿರಿಗೆ ಸಂತೋಷ. ಮಗುವಿನ ಜೊತೆ ಪ್ರತಿದಿನ ಆಟವಾಡುತ್ತಿದ್ದ ಅಜ್ಜಿ-ತಾತನಿಗೂ ಬೇಜಾರು. ಯಾವಾಗ ಮೊಮ್ಮಗ ಶಾಲೆಯಿಂದ ಹೊರಬರುತ್ತಾನೋ ಎಂದು ಗೇಟ್‌ನಲ್ಲೇ ಕಾಯುವ ಅಜ್ಜಂದಿರಿದ್ದಾರೆ. ಆದರೆ, ಯಾರೂ ಮಗು ಶಾಲೆಗೆ ಹೋಗಬಾರದೆಂದು ಬಯಸುವುದಿಲ್ಲ. ಏಕೆಂದರೆ ವಿದ್ಯೆ ಇಂದಿನ ಅನಿವಾರ್ಯತೆ ಕೂಡ.

ಮಕ್ಕಳು ಮೊದಮೊದಲು ಹಟ ಮಾಡಿದರೂ ದಿನ ಕಳೆದಂತೆ ಇಷ್ಟಪಟ್ಟು ಶಾಲೆಗೆ ಹೋಗುತ್ತಾರೆ. ಕೆಲವೇ ದಿನಗಳಲ್ಲಿ ತಮ್ಮ ಮುದ್ದಾದ ತೊದಲು ನುಡಿಗಳಿಂದ ಜನಗಣಮನ ಹೇಳಿದಾಗ ತಂದೆ-ತಾಯಿಯ ಸಂತೋಷಕ್ಕೆ ಬೆಲೆ ಕಟ್ಟಲಾಗದು. ಶಾಲೆ ನಮಗೆ ಬರೀ ಪುಸ್ತಕದಲ್ಲಿರುವ ಪಾಠವನ್ನು ಮಾತ್ರ ಹೇಳಿಕೊಡುವುದಿಲ್ಲ. ಅದು ಬದುಕಲು ಕಲಿಸುತ್ತದೆ. ನಾಲ್ಕು ಜನರ ಜೊತೆ ಹೇಗೆ ಬೆರೆಯಬೇಕೆಂಬುದನ್ನು ಕಲಿಸುತ್ತದೆ. ಸೋಲು-ಗೆಲುವಿನ ಪಾಠ ಹೇಳುತ್ತದೆ. ಕ್ರಮೇಣ ನಮ್ಮ ಜೀವನ ಶೈಲಿಯನ್ನೇ ಬದಲಾಯಿಸುತ್ತದೆ.

ಬರೀ ಡಿಗ್ರಿ ತಗೊಂಡು ಜೀವನದಲ್ಲಿ ಹಾಯಾಗಿ ಸೆಟ್ಲ ಆಗುತ್ತೇನೆ ಅನ್ನುವುದು ಇಂದು ಅಸಾಧ್ಯದ ಮಾತು. ಡಿಗ್ರಿಗೆ ಇಂದು ಹೆಚ್ಚೇನೂ ಬೆಲೆಯಿಲ್ಲ. ವಿಶೇಷ ಸ್ಕಿಲ್‌, ಉನ್ನತ ಕೋರ್ಸ್‌ಗಳಿಗೇ ಬೆಲೆ. ಕಾರ್ಪೊರೇಟ್‌ ಜಗತ್ತಿನಲ್ಲಿ ನಮ್ಮ ಓದು ಹಾಗೂ ಸಾಮರ್ಥ್ಯಕ್ಕೆ ತಕ್ಕಂತೆ ಕಡಿಮೆ ಅಥವಾ ಹೆಚ್ಚು ಸಂಬಳದ ಕೆಲಸ ಸಿಗುತ್ತದೆ. ಕೇವಲ ಡಿಗ್ರಿ ಓದಿ ದೊಡ್ಡ ಕೆಲಸದ ಕನಸು ಕಂಡರೆ ವ್ಯರ್ಥ. ತುಂಬಾ ಅದೃಷ್ಟವಂತರಿಗೆ ಮಾತ್ರ ಕಡಿಮೆ ವಿದ್ಯಾಭ್ಯಾಸ ಇದ್ದರೂ ಜೀವನದಲ್ಲಿ ಎಲ್ಲಾ ಯಶಸ್ಸು ಸಿಗಬಹುದು.

ದುಡ್ಡಿಗಿಂತ ವಿದ್ಯೆ ಮುಖ್ಯ

ಹುಡುಗ ಕೋಟಿಗಟ್ಟಲೆ ದುಡಿದಿದ್ದರೂ ಸರಿಯಾದ ಶಿಕ್ಷಣ ಪಡೆದಿಲ್ಲದೆ ಇದ್ದರೆ ಮದುವೆಯಾಗಬೇಕು ಅಂತ ಹುಡುಗಿ ಹುಡುಕುವಾಗ ತನ್ನ ಎಜ್ಯುಕೇಶನ್‌ ಕ್ವಾಲಿಫಿಕೇಶನ್‌ ಹೇಳಿಕೊಳ್ಳಲು ಹಿಂಜರಿಯುತ್ತಾನೆ. ಕಾಲ ಎಷ್ಟೇ ಬದಲಾದರೂ ಇಂದಿಗೂ ಹುಡುಗಿಗಿಂತ ಹುಡುಗ ಹೆಚ್ಚು ಓದಿರಬೇಕು ಎಂದೇ ಅಪ್ಪ-ಅಮ್ಮಂದಿರು ನಿರೀಕ್ಷಿಸುತ್ತಾರೆ. ಗಂಡು ಎಷ್ಟೇ ಶ್ರೀಮಂತನಾಗಿದ್ದರೂ ಅವನಿಗೆ ಒಳ್ಳೆಯ ಶಿಕ್ಷಣ ಇಲ್ಲದಿದ್ದರೆ ಎಜ್ಯುಕೇಟೆಡ್‌ ಬಡ ಹುಡುಗಿ ಕೂಡ ಅವನನ್ನು ಮದುವೆಯಾಗಲು ಹಿಂದೆ-ಮುಂದೆ ನೋಡುತ್ತಾಳೆ. ಹಾಗಾಗಿ ಗಂಡಿನ ಮನೆಯವರು ಮೊದಲೇ ಯೋಚಿಸಿ, ಕಡಿಮೆ ಓದಿರುವ ಹುಡುಗಿಯನ್ನೇ ಹುಡುಕುತ್ತಾರೆ. ಎಸ್ಸೆಸ್ಸೆಲ್ಸಿ-ಪಿಯುಸಿ ಫೇಲ್‌ ಆದ ಹುಡುಗ ಆಗರ್ಭ ಶ್ರೀಮಂತನಾಗಿದ್ದರೂ ಸುಶಿಕ್ಷಿತ ಹುಡುಗಿಯನ್ನು ಮದುವೆಯಾಗಲು ಸಾಧ್ಯವಿಲ್ಲ. ಏಕೆಂದರೆ ದುಡ್ಡಿಗಿಂತ ವಿದ್ಯೆ ಮುಖ್ಯ. ದುಡ್ಡು ನಾಳೆ ಹೋಗಬಹುದು, ಆದರೆ ಕಲಿತಿರುವ ವಿದ್ಯೆ ಎಲ್ಲಿಗೂ ಹೋಗುವುದಿಲ್ಲ. ಎಂತಹ ಕಷ್ಟ ಕಾಲದಲ್ಲೂ ಅದು ನಮ್ಮ ಕೈಹಿಡಿಯಬಲ್ಲುದು.

ದುಡ್ಡು ನಮಗೆ ಬೇಕೆನ್ನಿಸಿದ್ದನ್ನೆಲ್ಲ ಕೊಡಬಹುದು. ಆದರೆ ಒಳ್ಳೆಯ ವ್ಯಕ್ತಿತ್ವ, ಪ್ರಬುದ್ಧತೆ ಹಾಗೂ ತಿಳಿವಳಿಕೆಯನ್ನು ನೀಡುವುದು ಉತ್ತಮ ಶಿಕ್ಷಣ. ನಾವೆಲ್ಲ ದಿನನಿತ್ಯ ಎಷ್ಟೋ ಜನರನ್ನು ಭೇಟಿಯಾಗುತ್ತೇವೆ. ಎಜ್ಯುಕೇಟೆಡ್‌ ವ್ಯಕ್ತಿಯ ನಡವಳಿಕೆಗೂ, ತುಂಬಾ ಕಡಿಮೆ ಓದಿದ ವ್ಯಕ್ತಿಯ ನಡವಳಿಕೆಗೂ ಬಹಳ ವ್ಯತ್ಯಾಸಗಳು ಕಾಣುತ್ತವೆ. ನಮ್ಮ ಶಿಕ್ಷಣವೇ ನಮ್ಮ ಅರ್ಹತೆಯನ್ನೂ ಸೂಚಿಸುತ್ತದೆ. ನಮ್ಮ ಜೀವನದ ಗುಣಮಟ್ಟ, ನಮ್ಮ ಸಂಪಾದನೆ, ಸಮಾಜ ನಮ್ಮನ್ನು ಗೌರವಿಸುವ ರೀತಿ ಇವೆಲ್ಲಕ್ಕೂ ತಳಪಾಯ ಶಿಕ್ಷಣ.

ಬಡತನ ಯಾವುದಕ್ಕೂ ನೆಪವಲ್ಲ

ಇವತ್ತಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಮಾನ್ಯ ವಿದ್ಯಾಭ್ಯಾಸಕ್ಕೆ ಬೆಲೆಯೇ ಇಲ್ಲದಂತಾಗಿದೆ. ಸಾಮಾನ್ಯ ಡಿಗ್ರಿ ಪಡೆದರೆ ಕೋಟಿ ಕೋಟಿ ಜನರಲ್ಲಿ ನಾವೂ ಒಬ್ಬರಾಗಿ ಬದುಕುತ್ತೇವಷ್ಟೆ. ಆದರೆ, ವಿದ್ಯಾಭ್ಯಾಸಕ್ಕೆ ವಯಸ್ಸು ಅಥವಾ ಸಮಯದ ಪರಿವೆಯಿಲ್ಲ. ಕೆಲಸಕ್ಕೆ ಸೇರಿದ ಮೇಲೂ ಉನ್ನತ ಶಿಕ್ಷಣ ಪಡೆಯಬಹುದು. ಅದಕ್ಕೆ ದೃಢ ಮನಸ್ಸಿರಬೇಕಷ್ಟೆ.

ಬಹಳ ಜನರು ತಾವು ಹೆಚ್ಚು ಓದದೆ ಇರುವುದಕ್ಕೆ ಬಡತನದ ಕಾರಣ ಕೊಡುತ್ತಾರೆ. ನನ್ನ ಪ್ರಕಾರ ಅದು ಕಾರಣವಲ್ಲ, ನೆಪ. ಕಡು ಬಡತನದಿಂದ ಬಂದು ಅತ್ಯುನ್ನತ ಶಿಕ್ಷಣ ಪಡೆದವರ ಉದಾಹರಣೆಗಳು ಸಾಕಷ್ಟಿವೆ. ಬಡತನದ ನೆಪ ಹೇಳಿ ಶಿಕ್ಷಣ ಪಡೆಯದೆ ಇದ್ದರೆ ಜೀವನಪೂರ್ತಿ ಬಡವರಾಗಿಯೇ ಇರಬೇಕಾಗುತ್ತದೆ. ನಾನು ಶಾಲೆಯಲ್ಲಿ ಓದುತ್ತಿದ್ದಾಗ ನನಗೂ ಬಡತನ ಇತ್ತು. ನಾನು ಐದನೇ ತರಗತಿಯಲ್ಲಿದ್ದಾಗಲೇ ಕೆಲಸ ಮಾಡಿ ಹಣ ಸಂಪಾದನೆ ಮಾಡುತ್ತಿದ್ದೆ. ಓದೋದಕ್ಕೆ ನನ್ನ ಬಡತನವನ್ನು ಮುಂದೆ ಮಾಡಿ ಅಳುತ್ತ ಕೂರಲಿಲ್ಲ. ಇವತ್ತು ನಾನು ಏನಾಗಿದ್ದೇನೆ ಅಥವಾ ನಾಳೆ ನಾನು ಏನಾಗುತ್ತೇನೆ ಎಂಬುದು ಮುಖ್ಯವಲ್ಲ. ಪ್ರಪಂಚದಲ್ಲಿ ಶೇ.77ರಷ್ಟು ಜನ ಬಡತನದಲ್ಲೇ ಬೆಳೆದವರು. ನಮಗೆ ಎಷ್ಟೇ ಬುದ್ಧಿವಂತಿಕೆ ಇದ್ದರೂ, ಏನನ್ನೂ ಕಲಿಯದೆ ಸಾಧನೆ ಮಾಡಬಲ್ಲೆ ಎಂಬ ಧೃಡ ನಂಬಿಕೆ ನಮ್ಮಲ್ಲಿದ್ದರೂ, ವಿದ್ಯಾಭ್ಯಾಸವಿಲ್ಲದೆ ನಮ್ಮ ಬುದ್ಧಿವಂತಿಕೆಗೆ ತೂಕವಿರುವುದಿಲ್ಲ.

ಆದ್ದರಿಂದಲೇ ಸುಭಾಷಿತಕಾರ ಹೇಳಿದ್ದು: ವಿದ್ಯಾ ಬಂಧುಜನೋ ವಿದೇಶಗಮನೇ, ವಿದ್ಯಾ ಪರಾ ದೇವತಾ. ವಿದೇಶಗಳಿಗೆ ಹೋದಾಗ, ಎಲ್ಲವನ್ನೂ ಕಳೆದುಕೊಂಡು ಪಾಪರ್‌ ಆದಾಗ, ಎಲ್ಲರೂ ನಮ್ಮಿಂದ ದೂರವಾದಾಗ ನೆರವಿಗೆ ಬರುವುದು ವಿದ್ಯೆಯೊಂದೇ. ಅದನ್ನು ಯಾರೂ ಕದಿಯಲು ಸಾಧ್ಯವಿಲ್ಲ. ನಮಗೆ ಆತ್ಮಸ್ಥೈರ್ಯ, ಸ್ವಯಂಗೌರವ, ಎಲ್ಲ ಗೊಂದಲಗಳನ್ನೂ ನಿಭಾಯಿಸುವ ಚಾಣಾಕ್ಷತನ ಮುಂತಾದವುಗಳನ್ನು ಕೊಡುವುದು ವಿದ್ಯೆಯೇ. ಬೇಕಾದರೆ ಗಮನಿಸಿ, ಸುಶಿಕ್ಷಿತ ವ್ಯಕ್ತಿಗಳು ಸಾಮಾನ್ಯವಾಗಿ ಕೆಟ್ಟ ಕೆಟ್ಟ ಪದಗಳ ಬಳಕೆ ಮಾಡುವುದಿಲ್ಲ, ಬೀದಿಯಲ್ಲಿ ನಿಂತು ಜಗಳ ಆಡಲು ಸಂಕೋಚ ಪಟ್ಟುಕೊಳ್ಳುತ್ತಾರೆ. ಎಲ್ಲರೂ ಅವರವರ ಪಾಡಿಗೆ ಬದುಕಲಿ ಅಂತ ಯಾರಿಗೂ ತೊಂದರೆ ಕೊಡದೆ, ಬೇಕೂ ಬೇಕೂ ಅಂತ ಮೋಸ ಮಾಡದೆ, ರೋಡಿನಲ್ಲಿ ನಿಂತು ಕೀಟಲೆ ಮಾಡದೆ, ಬೀದಿ ಅಲೆಯುತ್ತ ಟೈಂಪಾಸ್‌ ಮಾಡದೆ ತಮ್ಮ ಕೆಲಸ ಮಾಡಿಕೊಂಡು ಅಚ್ಚುಕಟ್ಟಾಗಿರುತ್ತಾರೆ. ಉನ್ನತ ಶಿಕ್ಷಣ ಪಡೆದ ವ್ಯಕ್ತಿಯ ವ್ಯಕ್ತಿತ್ವವೇ ಬೇರೆ. ಸಮಾಜ ಅವರ ಬಡತನವನ್ನು ಹೀಯಾಳಿಸುವುದಿಲ್ಲ. ಅವರು ಹೇಗೇ ಇದ್ದರೂ ಅವರ ಶಿಕ್ಷಣದ ಪರಿಪಕ್ವತೆಯನ್ನು ಗೌರವಿಸುತ್ತದೆ. ಇದಕ್ಕೆ ಅಪವಾದಗಳೂ ಇವೆ. ಸುಶಿಕ್ಷಿತ ಬುದ್ಧಿಜೀವಿಗಳು ಎನ್ನಿಸಿಕೊಂಡವರೂ ಸಲ್ಲದ ಉಪದ್ವಾéಪಿತನಕ್ಕೆ ಕೈಹಾಕಿ, ಬಾಯಿಗೆ ಬಂದ ಹಾಗೆ ಮಾತನಾಡಿ ಗೌರವ ಕಳೆದುಕೊಳ್ಳುವುದುಂಟು. ಅದು ಶಿಕ್ಷಣದ ಸಮಸ್ಯೆಯಲ್ಲ. ಪಡೆದ ಶಿಕ್ಷಣವನ್ನು ಸದುಪಯೋಗ ಮಾಡಿಕೊಳ್ಳದವರ ಸಮಸ್ಯೆ.

ಓದದೆ ಕೆಟ್ಟವರು

ಓದುವ ಸಮಯದಲ್ಲಿ ಓದದೆ ಕಾಲಹರಣ ಮಾಡಿ ಈಗ ಕಷ್ಟಪಡುತ್ತಿರುವ ನನ್ನ ಓರಗೆಯ ಹಲವರನ್ನು ನೋಡಿದ್ದೇನೆ. ಅವರಿಗೆ ಈಗ ಶಿಕ್ಷಣದ ಮಹತ್ವ ಅರಿವಿಗೆ ಬರುತ್ತಿದೆ. ಆದರೆ ಕಾಲ ಮಿಂಚಿದೆ. ಈಗ ಓದಲು ಹೊರಟರೆ ಸಂಸಾರ ನೋಡಿಕೊಳ್ಳುವವರು ಯಾರೆಂಬ ಚಿಂತೆ. ಆದರೆ ಈಗಲೂ ಛಲದಿಂದ ಹೊರಟರೆ ಅವರು ಒಳ್ಳೆಯ ಶಿಕ್ಷಣ ಪಡೆಯುವುದು ಅಸಾಧ್ಯವೇನಲ್ಲ.

ಕೆಲವರು ನನಗೆ ಎಜ್ಯುಕೇಟೆಡ್‌ ಹುಡುಗಿ ಬೇಡ, ಕಡಿಮೆ ಓದಿರುವ ಹುಡುಗಿಯನ್ನು ಮದುವೆಯಾದರೆ ನಾನು ಹೇಳಿದಂತೆ ಕೇಳುತ್ತಾಳೆ ಎಂಬ ಭ್ರಮೆಯಲ್ಲಿ ಅಂತಹವರನ್ನೇ ಹುಡುಕಿ ಮದುವೆಯಾಗುತ್ತಾರೆ. ಆದರೆ ಕೆಲವೇ ತಿಂಗಳಲ್ಲಿ ಜಗಳ ಶುರುವಾಗುತ್ತದೆ. ಸುಶಿಕ್ಷಿತ ಗಂಡಿಗೂ, ಅಶಿಕ್ಷಿತ ಹೆಣ್ಣಿಗೂ ಹೊಂದಾಣಿಕೆಯೇ ಆಗುವುದಿಲ್ಲ. ಆತ ಹೆಂಡತಿಯನ್ನು ಬೈಯುವುದೇ ನೀನು ಅನ್‌ಎಜ್ಯುಕೇಟೆಡ್‌ ಅಂತ. ವಿದ್ಯಾವಂತರ ಮನಸ್ಥಿತಿಗೂ ವಿದ್ಯಾವಂಚಿತರ ಮನಸ್ಥಿತಿಗೂ ಬಹಳ ವ್ಯತ್ಯಾಸವಿದೆ. ಕೆಲ ಹೆಣ್ಮಕ್ಕಳು ಮದುವೆಯಾದ ಮೇಲೂ ಉನ್ನತ ವಿದ್ಯಾಭ್ಯಾಸ ಮಾಡಿ ಮೇಲೆ ಬರುತ್ತಾರೆ. ಶಿಕ್ಷಣ ಕೇವಲ ದುಡಿಯುವುದಕ್ಕೆ ಮಾತ್ರವಲ್ಲ, ಉತ್ತಮ ಬದುಕು ಕಟ್ಟಿಕೊಳ್ಳುವುದಕ್ಕೂ ಅವಶ್ಯಕ. ಮುಂದೆ ಎಂತಹ ಸಂದರ್ಭಗಳು ಬರುತ್ತವೆ ಎಂದು ಯಾರೂ ಹೇಳಲಾಗದು. ಹಾಗಾಗಿ ಜ್ಞಾನ ಸಂಪಾದಿಸಿ, ಎಂತಹ ಸವಾಲಿನ ಕ್ಷಣದಲ್ಲೂ ಬದುಕಿ ತೋರಿಸಬಲ್ಲ ಆತ್ಮವಿಶ್ವಾಸ ಗಳಿಸಿಕೊಳ್ಳುವುದು ಗೃಹಿಣಿಯರಿಗೂ ಒಳ್ಳೆಯದು. ಶಿಕ್ಷಣದಿಂದ ನಾವು ಮುಂದೆ ಹೋಗುತ್ತೇವೆಯೇ ಹೊರತು ಹಿಂದೆ ಬರುವುದಿಲ್ಲ.

ಆದರೆ ಪುಸ್ತಕದ ಶಿಕ್ಷಣವೇ ಎಲ್ಲವೂ ಅಲ್ಲ ಎಂಬುದೂ ನಮ್ಮ ಮನಸ್ಸಿನಲ್ಲಿರಬೇಕು. ಬದುಕು ಎಲ್ಲಕ್ಕಿಂತ ದೊಡ್ಡ ಶಿಕ್ಷಣ.

ಶಿಕ್ಷಣ ಕೇವಲ ದುಡಿಯುವುದಕ್ಕೆ ಮಾತ್ರವಲ್ಲ, ಉತ್ತಮ ಬದುಕು ಕಟ್ಟಿಕೊಳ್ಳುವುದಕ್ಕೂ ಅವಶ್ಯಕ. ಮುಂದೆ ಎಂತಹ ಸಂದರ್ಭಗಳು ಬರುತ್ತವೆ ಎಂದು ಯಾರೂ ಹೇಳಲಾಗದು. ಹಾಗಾಗಿ ಜ್ಞಾನ ಸಂಪಾದಿಸಿ, ಎಂತಹ ಸವಾಲಿನ ಕ್ಷಣದಲ್ಲೂ ಬದುಕಿ ತೋರಿಸಬಲ್ಲ ಆತ್ಮವಿಶ್ವಾಸ ಗಳಿಸಿಕೊಳ್ಳುವುದು ಗೃಹಿಣಿಯರಿಗೂ ಒಳ್ಳೆಯದು.

- ರೂಪಾ ಅಯ್ಯರ್‌

 

Trending videos

 
ಓದುಗರ ಅಭಿಪ್ರಾಯ
Back to Top