Updated at Tue,6th Sep, 2016 12:36PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಬಿಎಸ್‌ವೈ ವಿರುದ್ಧದ 3 ಕೇಸಿಗೆ ಹೈಕೋರ್ಟ್‌ ತಡೆ

ಬೆಂಗಳೂರು: ಬೆಂಗಳೂರಿನ ಬಿಳೇಕಹಳ್ಳಿ, ಹಲಗೇವಡೇರಹಳ್ಳಿ, ಮಹಾಲಕ್ಷ್ಮೀ ಬಡಾವಣೆಯ ಜೆ.ಬಿ ಕಾವಲ್‌ ಡಿನೋಟಿಫಿಕೇಷನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಎಸ್‌ಐಟಿ ಅಧಿಕಾರಿಗಳು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ದಾಖಲಿಸಿದ್ದ ಮೂರು ಎಫ್ಐಆರ್‌ಗಳಿಗೆ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಸಿಎಜಿ ವರದಿ ಆಧರಿಸಿ ಲೋಕಾಯುಕ್ತ ಎಸ್‌ಐಟಿ ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್‌ ರದ್ದು ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ರತ್ನಕಲಾ ಅವರಿದ್ದ ಏಕಸದಸ್ಯ ಪೀಠ ಮೂರು ಪ್ರಕರಣಗಳ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಅರ್ಜಿದಾರರ ಪರ ಹಿರಿಯ ವಕೀಲರು ವಾದ ಮಂಡಿಸಿ, ಸಿಎಜಿ ವರದಿ ಆಧಾರದ ಮೇಲೆ ತಮ್ಮ ಕಕ್ಷಿದಾರರ ವಿರುದ್ಧ ಲೋಕಾಯುಕ್ತ ಎಸ್‌ಎಟಿ ದಾಖಲಿಸಿರುವ ಪ್ರಕರಣಗಳ ತನಿಖೆಗೆ ತಡೆಯಾಜ್ಞೆ ನೀಡಬೇಕು. ವರದಿ ಆಧರಿಸಿ ಇನ್ನು ಮುಂದೆ ಎಫ್ಐಆರ್‌ ದಾಖಲಿಸದಂತೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು. ಈ ಪೈಕಿ ತಡೆಯಾಜ್ಞೆ ನೀಡಬೇಕು ಎಂಬ ಕೋರಿಕೆಯನ್ನು ನ್ಯಾಯಾಲಯ ಪರಿಗಣಿಸಿತಾದರೂ ಎಫ್ಐಆರ್‌ ದಾಖಲಿಸದಂತೆ ನಿರ್ದೇಶನ ನೀಡಬೇಕು ಎಂದು ಕೋರಿಕೆಯನ್ನು ತಳ್ಳಿಹಾಕಿತು.

ಇದಕ್ಕೂ ಮುನ್ನ ಸಿಎಜಿ ವರದಿ ಕುರಿತಂತೆ ನ್ಯಾಯಪೀಠಕ್ಕೆ ವಿವರಣೆ ನೀಡಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೃಷ್ಣ ಎಸ್‌.ದೀಕ್ಷಿತ್‌, ಸಿಎಜಿ ವರದಿ ಸಂಸತ್ತು ಹಾಗೂ ವಿಧಾನಸಭೆ ಸ್ವತ್ತು. ವರದಿಯನ್ನು ಸರ್ಕಾರದ ಕಾರ್ಯವೈಖರಿಯ ಆತ್ಮಾವಲೋಕನ ಹಾಗೂ ಹೊಸ ನಿಯಮಗಳ ಜಾರಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಆದ್ದರಿಂದ ಅದನ್ನು ಆಧರಿಸಿ ಪೊಲೀಸರು ಕ್ರಮಕೈಗೊಳ್ಳಲು ಅವಕಾಶವಿಲ್ಲ. ಜತೆಗೆ ಸಿಎಜಿ ವರದಿ ಪಾವಿತ್ರ್ಯತೆ ಪ್ರಶ್ನಿಸಲು ನ್ಯಾಯಾಲಯ ಹಾಗೂ ಸರ್ಕಾರಿ ಇಲಾಖೆಗಳಿಗೆ ಅಧಿಕಾರವಿಲ್ಲ. ಸಿಎಜಿ ವರದಿ ವಿಧಾನಸಭೆಯಲ್ಲೇ ಮಂಡನೆಯಾಗಬೇಕು ಎಂದು ಸ್ಪಷ್ಟಪಡಿಸಿದರು.

ಸಿಎಜಿ ವರದಿ ಬದ್ಧತೆ ಬಗ್ಗೆ ಅಧೀನ ನ್ಯಾಯಾಲಯಗಳು ಪ್ರಶ್ನಿಸುವುದು ಸಾಂವಿಧಾನಿಕ ಘನತೆಗೆ ಧಕ್ಕೆಯಾಗುತ್ತದೆ. ಮೂರು ಹೈಕೋರ್ಟ್‌ಗಳು ಈ ವರದಿ ಕೇವಲ ಶಾಸನಸಭೆಯ ಸ್ವತ್ತು ಎಂದು ಸ್ಪಷ್ಟಪಡಿಸಿವೆ. ವಾದಕ್ಕೆ ಪೂರಕವಾಗಿ ಸುಪ್ರೀಂಕೋರ್ಟ್‌ ತೀರ್ಪುಗಳಿವೆ. ಮಹಾಲೇಖಪಾಲರ ಕಚೇರಿ(ಸಿಎಜಿ) ಹಾಗೂ ವರದಿ ಕುರಿತು 1949ರ ಮೇ ತಿಂಗಳಲ್ಲಿ ಪ್ರಸ್ತಾಪಿಸಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು, ಮಹಾಲೇಖಪಾಲರ ಕಚೇರಿಗೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಕಚೇರಿಗಿಂತಲೂ ಹೆಚ್ಚಿನ ಮಹತ್ವ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದರು ಎಂದು ವಿವರಿಸಿದರು.

 

Trending videos

 
ಓದುಗರ ಅಭಿಪ್ರಾಯ
Back to Top