Updated at Tue,6th Sep, 2016 12:36PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಲೋಕ ಭ್ರಷ್ಟರ ವಿರುದ್ಧ ಇಂದು ಆರೋಪಪಟ್ಟಿ

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಬುಧವಾರ ಆರೋಪ ಪಟ್ಟಿ ಸಲ್ಲಿಕೆ ಮಾಡಲಿದ್ದಾರೆ.

ಬೆಂಗಳೂರು ನಗರ ಜಿಲ್ಲಾ ಪಂಚಾಯತ್‌ನ ಕಾರ್ಯನಿರ್ವಾಹಕ ಎಂಜಿನಿಯರ್‌ ಎಂ.ಎನ್‌.ಕೃಷ್ಣಮೂರ್ತಿ ನೀಡಿದ ದೂರಿನ ಮೇರೆಗೆ ಎಸ್‌ಐಟಿ ಅಧಿಕಾರಿಗಳು ತನಿಖೆ ಪೂರ್ಣಗೊಳಿಸಿದ್ದಾರೆ. ಗೃಹ ಇಲಾಖೆ ಹಸಿರು ನಿಶಾನೆ ತೋರಿರುವ ಹಿನ್ನೆಲೆಯಲ್ಲಿ ಹಾಗೂ ಲೋಕಾಯುಕ್ತ ಸಂಸ್ಥೆಯ ಕಾನೂನು ಘಟಕದಿಂದಲೂ ಅನುಮತಿ ದೊರಕಿರುವ ಕಾರಣ ಆರೋಪ ಪಟ್ಟಿ ಸಲ್ಲಿಕೆಯಾಗಲಿದೆ.

ಎಂ.ಎನ್‌.ಕೃಷ್ಣಮೂರ್ತಿ ನೀಡಿರುವ ದೂರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಅಮಾನತುಗೊಂಡಿರುವ ಸಂಸ್ಥೆಯ ಪಿಆರ್‌ಒ ಸಯ್ಯದ್‌ ರಿಯಾಜ್‌, ಅಶೋಕ್‌ ಕುಮಾರ್‌, ವಿ.ಭಾಸ್ಕರ್‌, ಶಂಕರೇಗೌಡ, ಶ್ರೀನಿವಾಸಗೌಡ ಆರೋಪಿಗಳಾಗಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ದಾಖಲಾಗಿದ್ದ ಲೋಕಾಯುಕ್ತ ಕಚೇರಿ ಭ್ರಷ್ಟಾಚಾರ ಹಗರಣದ ಮೊದಲ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಮುಕ್ತಾಯಗೊಂಡಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಮಗ್ರ ತನಿಖೆ ನಡೆಸುತ್ತಿರುವ ಎಸ್‌ಐಟಿಗೆ ಒಂದು ವೇಳೆ ಮತ್ತಷ್ಟು ಸಾಕ್ಷ್ಯ ಹಾಗೂ ಮಾಹಿತಿಗಳು ಲಭ್ಯವಾದಲ್ಲಿ ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ಭದ್ರಾ ಮೇಲ್ದಂಡೆ ಯೋಜನೆಯ ಎಂಜಿನಿಯರ್‌ ಚನ್ನಬಸಪ್ಪ ನೀಡಿರುವ ದೂರಿನನ್ವಯವು ಸಹ ಆರೋಪ ಪಟ್ಟಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ಈ ಪ್ರಕರಣದಲ್ಲಿ ಲೋಕಾಯುಕ್ತರ ಪುತ್ರ ಅಶ್ವಿ‌ನ್‌ ರಾವ್‌ ಮತ್ತು ವಿ.ಭಾಸ್ಕರ್‌ ಆರೋಪಿಗಳಾಗಿದ್ದಾರೆ.

ಬಾಡಿ ವಾರಂಟ್‌ ನಿರಾಕರಣೆ: ತುಂಗಭದ್ರಾ ಮೇಲ್ದಂಡೆ ಯೋಜನೆ ಕಾರ್ಯ ನಿರ್ವಾಹಕ ಎಂಜಿನಿಯರ್‌ ಚನ್ನಬಸಪ್ಪನೀಡಿರುವ ದೂರಿನ ಸಂಬಂಧ ಹೆಚ್ಚಿನ ವಿಚಾರಣೆ ನಡೆಸಲು ಅಮಾನತುಗೊಂಡಿರುವ ಪಿಆರ್‌ಓ ಸಯ್ಯದ್‌ ರಿಯಾಜ್‌ ಹಾಗೂ ಲೋಕಾಯುಕ್ತರ ಪುತ್ರ ಅಶ್ವಿ‌ನ್‌ರಾವ್‌ ಅವರನ್ನು ತಮ್ಮ ವಶಕ್ಕೆ ನೀಡುವಂತೆ ಎಸ್‌ಐಟಿ ಅಧಿಕಾರಿಗಳು ಸಲ್ಲಿಸಿದ್ದ ಬಾಡಿ ವಾರಂಟ್‌ ಅರ್ಜಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಸಯ್ಯದ್‌ ರಿಯಾಜ್‌ ಈಗಾಗಲೇ ಜಾಮೀನು ಪಡೆದಿದ್ದಾರೆ. ಚನ್ನಬಸಪ್ಪದೂರಿನಲ್ಲಿ ರಿಯಾಜ್‌ ಮತ್ತು ಅಶ್ವಿ‌ನ್‌ ರಾವ್‌ರನ್ನು ಹೆಚ್ಚಿನ ವಿಚಾರಣೆ ನಡೆಸಬೇಕಾಗಿದ್ದು, ಅವರನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಕೋರಿದರು. ಆದರೆ, ನ್ಯಾಯಾಲಯವು ಮಂಗಳವಾರ ವಿಚಾರಣೆ ನಡೆಸಿ ಬಾಡಿ ವಾರಂಟ್‌ನ್ನು ತಿರಸ್ಕೃರಿಸಿತು.

ಮತ್ತೂಂದು ಬಾಡಿ ವಾರೆಂಟ್‌ಗೆ ಅರ್ಜಿ: ಇದೇ ವೇಳೆ ಎಸ್‌ಐಟಿ ಅಧಿಕಾರಿಗಳು ಕೆಪಿಸಿಸಿ ಸದಸ್ಯ ಉದ್ಯಮಿ ಪಿ.ಎನ್‌.ಕೃಷ್ಣಮೂರ್ತಿ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಆರೋಪಿಗಳಾದ ಅಶ್ವಿ‌ನ್‌ ರಾವ್‌, ಸಯ್ಯದ್‌ ರಿಯಾಜ್‌ ಮತ್ತು ವಿ.ಭಾಸ್ಕರ್‌ರನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಬಾಡಿ ವಾರಂಟ್‌ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಮಂಗಳವಾರ ಎಸ್‌ಐಟಿ ಅಧಿಕಾರಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯ ಆದೇಶವನ್ನು ನ್ಯಾಯಾಲಯವು ಸೆ.19ಕ್ಕೆ ಕಾಯ್ದಿರಿಸಿದೆ.

ಸಕ್ಷಮ ಪ್ರಾಧಿಕಾರದಿಂದ ಅನುಮತಿ: ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಯ್ಯದ್‌ ರಿಯಾಜ್‌ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಸರ್ಕಾರ ಅನುಮತಿ ನೀಡಿದೆ. ಪ್ರಕರಣದಲ್ಲಿ ಬಂಧಿತ 11 ಆರೋಪಿಗಳ ಪೈಕಿ ಸಯ್ಯದ್‌ ರಿಯಾಜ್‌ ಉನ್ನತ ಅಧಿಕಾರಿಯಾಗಿರುವ ಹಿನ್ನೆಲೆಯಲ್ಲಿ ಆತನ ವಿರುದ್ಧ ಆರೋಪಪಟ್ಟಿ ಸಲ್ಲಿಕೆಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಅಗತ್ಯ. ಹೀಗಾಗಿ ಎಸ್‌ಐಟಿ ಅಧಿಕಾರಿಗಳು ಸರ್ಕಾರಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದರು. ಇದನ್ನು ಪರಿಶೀಲಿಸಿದ ಸರ್ಕಾರ ಅನುಮತಿ ನೀಡಿದೆ.

 

Trending videos

 
ಓದುಗರ ಅಭಿಪ್ರಾಯ
Back to Top