ಬೆಂಗಳೂರು ರೈಲು ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು

ಬೆಂಗಳೂರು: ರಾಜಧಾನಿಯ ಸಿಟಿ ರೈಲು ನಿಲ್ದಾಣಕ್ಕೆ "ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಹೆಸರು ನಾಮಕರಣ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ಕನ್ನಡಪರ ಹೋರಾಟಗಾರರ ಬಹುದಿನಗಳ ಕನಸು ಸಾಕಾರವಾಗಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರು ನಾಮಕರಣ ಕುರಿತು ಸೋಮವಾರ ನಗರಾಭಿವೃದ್ಧಿ ಇಲಾಖೆಯಿಂದ ಆದೇಶ ಹೊರಬಿದ್ದಿದೆ. ರಾಯಣ್ಣ ಹೆಸರು ನಾಮಕರಣ ಮಾಡುವ ಕುರಿತು ರೈಲ್ವೆ ಇಲಾಖೆ 2015ರ ಏಪ್ರಿಲ್ 30ರಂದು ಒಪ್ಪಿಗೆ ನೀಡಿ ಆ ಕುರಿತು ಅಧಿಕೃತ ಆದೇಶ ಹೊರಡಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.
ಸಂಗೊಳ್ಳಿ ರಾಯಣ್ಣ ಹೆಸರು ನಾಮಕರಣ ಕುರಿತು ದಶಕಗಳಿಂದ ಹೋರಾಟ ನಡೆಯುತಿತ್ತು. ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಈ ಕುರಿತು ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದವು. ಮುಖ್ಯಮಂತ್ರಿಗಳ ಸಹಿತ ರಾಜ್ಯದ ನಿಯೋಗವು ದೆಹಲಿಗೆ ಹಲವಾರು ಬಾರಿ ಹೋಗಿ ಮನವಿಯನ್ನೂ ಸಲ್ಲಿಸಿತ್ತು. ಕನ್ನಡಪರ ಸಂಘಟನೆಗಳು 2010ರಲ್ಲಿ ರೈಲು ನಿಲ್ದಾಣದ ಮುಂಭಾಗ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನೂ ಅನಾವರಣ ಮಾಡಿದ್ದವು.