Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಭಾರತಕ್ಕೇಕೆ ಬೇಕು ಭದ್ರತಾ ಮಂಡಳಿ ಸ್ಥಾನ?

ವಿಶ್ವಸಂಸ್ಥೆ ಭದ್ರತಾ ಮಂಡಳಿ ಪುನರ್‌ ರಚನೆ ಕುರಿತ ಪ್ರಸ್ತಾವನೆಗೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಸಮ್ಮತಿ ನೀಡಿವೆ. ಈ ಹಿನ್ನೆಲೆಯಲ್ಲಿ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯ ಸ್ಥಾನ ಪಡೆಯಬೇಕೆನ್ನುವ ಭಾರತ ಆಸೆ ಮತ್ತೆ ಚಿಗುರೊಡೆದಿದೆ. ಖಾಯಂ ಸದಸ್ಯ ಸ್ಥಾನ ಪಡೆಯಬೇಕೆನ್ನುವ ಭಾರತದ ಹೋರಾಟ ಇಂದು ನಿನ್ನೆಯದಲ್ಲ. ಅದಕ್ಕೆ ನಾನಾ ರೀತಿಯಲ್ಲಿ ಅದು ಪ್ರಯತ್ನಿಸುತ್ತಲೇ ಇದೆ. ಆದರೆ ಇದುವರೆಗೂ ಅದು ಕನಸಾಗಿಯೇ ಉಳಿದಿದೆ. ಸದ್ಯ ಪುನರ್‌ರಚನೆ ಪ್ರಸ್ತಾವ ಕುರಿತ ಕರಡು ಸ್ವೀಕೃತಗೊಂಡು ಚರ್ಚೆಯಾಗಲಿದೆ. ಬಳಿಕವಷ್ಟೇ ಈ ಕುರಿತ ಪ್ರಕ್ರಿಯೆಗಳು ಆರಂಭವಾಗಲಿವೆ. ಈ ಹಿನ್ನೆಲೆಯಲ್ಲಿ ಭದ್ರತಾ ಮಂಡಳಿ ಖಾಯಂ ಸದಸ್ಯತ್ವಕ್ಕೇಕೆ ಅಷ್ಟೊಂದು ಮಹತ್ವ?ಈ ಸಮಿತಿಯ ಕಾರ್ಯವೇನು? ಇತ್ಯಾದಿಗಳ ಕುರಿತ ವಿವರಗಳು ಇಲ್ಲಿವೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿ

ವಿಶ್ವಸಂಸ್ಥೆಯ ಪ್ರಮುಖ ಅಂಗಗಳಲ್ಲಿ ಒಂದು. ಇದರ ಸಾಮಾನ್ಯ ಜವಾಬ್ದಾರಿ ಎಂದರೆ ಅಂತಾರಾಷ್ಟ್ರೀಯವಾಗಿ ಶಾಂತಿಯನ್ನು ಕಾಪಾಡಿಕೊಂಡು ಬರುವುದು ಮತ್ತು ಭದ್ರತೆಯ ಮೇಲ್ವಿಚಾರಣೆಯ ಹೊಣೆಯನ್ನು ಹೊಂದಿದೆ. ಎರಡನೇ ಮಹಾಯುದ್ಧ ನಡೆದ ಬಳಿಕ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸ್ಥಾಪನೆಯಾಗಿತ್ತು. ವಿವಿಧ ದೇಶಗಳ ನಡುವೆ ಶಾಂತಿ ಮೂಡಿಸುವಲ್ಲಿ ವಿಫ‌ಲವಾಗಿದ್ದು ಮತ್ತು ಯುದ್ಧದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ 1946 ಜ.17ರಂದು ಅಸ್ತಿತ್ವಕ್ಕೆ ಬಂದಿತ್ತು. ಅಂದೇ ಮಂಡಳಿಯ ಪ್ರಥಮ ಸಭೆಯೂ ಆಯೋಜಿತವಾಗಿತ್ತು. ಈ ವೇಳೆ ವಿಶ್ವದಲ್ಲಿ ಶಾಂತಿ ಕಾಪಾಡಬೇಕು ಮತ್ತು ಇದರ ಮೇಲ್ವಿಚಾರಣೆ ನಡೆಸಬೇಕೆಂದು ದೇಶಗಳು ತೀರ್ಮಾನಿಸಿದ್ದವು. ಲಂಡನ್‌ನ ವೆಸ್ಟ್‌ಮಿನಿಸ್ಟರ್‌ ಚರ್ಚ್‌ ಹೌಸ್‌ನಲ್ಲಿ ಮೊದಲ ಸಭೆ ನಡೆದಿದ್ದು, ಈ ಕುರಿತು ಒಪ್ಪಂದಕ್ಕೆ ಬರಲಾಗಿತ್ತು. ಇಂದು ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳ ನಡುವೆ ಶಾಂತಿ, ಯುದೊœàನ್ಮಾದದ ವಿರುದ್ಧ ನಿರ್ಬಂಧಗಳು, ಶಾಂತಿ ಪಾಲನಾ ಪಡೆಯನ್ನು ಕಳಿಸುವುದು, ಕಾರ್ಯಾಚರಣೆ ಇತ್ಯಾದಿಗಳ ಸ್ವಾಮ್ಯಗಳನ್ನು ಹೊಂದಿದೆ. ವಿಶ್ವಸಂಸ್ಥೆ ತನ್ನ ಬಜೆಟ್‌ನಲ್ಲೇ ಒಂದಿಷ್ಟನ್ನು ಭದ್ರತಾ ಮಂಡಳಿಗೆ ತೆಗೆದಿರಿಸುತ್ತದೆ. ಇದರಿಂದ ಶಾಂತಿ ಪಾಲನಾ ಪಡೆ ಖರ್ಚುವೆಚ್ಚಗಳನ್ನು ನೋಡಿಕೊಳ್ಳಲಾಗುತ್ತದೆ. ಶಾಂತಿ ಪಾಲನಾ ಪಡೆಗೆ ವಿವಿಧ ಸದಸ್ಯ ರಾಷ್ಟ್ರಗಳ ರಕ್ಷಣಾ ಪಡೆಗಳು ಸೇವೆ ಸಲ್ಲಿಸುವ ಕ್ರಮವಿದೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿ ಯಾಕಾಗಿ?

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಈ ಕಾರಣಕ್ಕಾಗಿ ಸ್ಥಾಪಿಸಲಾಗಿದೆ.
- ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ
- ದೇಶ ದೇಶಗಳ ನಡುವೆ ಉತ್ತಮ ಸಂಬಂಧ ವೃದ್ಧಿ
- ಅಂತಾರಾಷ್ಟ್ರೀಯ ಸಮಸ್ಯೆಗಳ ಪರಿಹಾರದಲ್ಲಿ ಸಹಕಾರ, ಮಾನವ ಹಕ್ಕುಗಳ ರಕ್ಷಣೆಗೆ ಕೆಲಸ
- ದೇಶ ದೇಶಗಳ ಮಧ್ಯೆ ವಿವಧ ಚಟುವಟಿಕೆಗಳನ್ನು ಸಂಘಟಿಸುವುದು.

ಭದ್ರತಾ ಮಂಡಳಿ ಸದಸ್ಯ ರಾಷ್ಟ್ರಗಳು ಯಾವುವು?

ವಿಶ್ವಸಂಸ್ಥೆ ಖಾಯಂ ಸದಸ್ಯ ರಾಷ್ಟ್ರಗಳು ಐದು. ಇದು ಹೊರತಾಗಿ ಹತ್ತು ಖಾಯಂ ಅಲ್ಲದ ರಾಷ್ಟ್ರಗಳನ್ನು ಹೊಂದಿದೆ. ಇವುಗಳ ಅಧಿಕಾರಾವಧಿ 2 ವರ್ಷಗಳು. ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಖಾಯಂ ಅಲ್ಲದ ಸದಸ್ಯ ಸ್ಥಾನಕ್ಕೆ ಆಯ್ಕೆ ಮಾಡಲಾಗುತ್ತದೆ. ಭದ್ರತಾ ಮಂಡಳಿ ಸದಸ್ಯತ್ವವನ್ನು ಖಾಯಂ ಸದಸ್ಯತ್ವದೊಂದಿಗೆ ವಿವಿಧ ಖಂಡಗಳಿಗೆ ಪ್ರಾಧಾನ್ಯತೆ ನೀಡಿ ಕೊಡಲಾಗುತ್ತದೆ. ಚೀನಾ, ಫ್ರಾನ್ಸ್‌, ರಷ್ಯಾ, ಅಮೆರಿಕ ಮತ್ತು ಬ್ರಿಟನ್‌ 5 ಖಾಯಂ ಸದಸ್ಯ ರಾಷ್ಟ್ರಗಳಾಗಿದ್ದರೆ, ಸದ್ಯ ಅಂಗೋಲಾ, ಚಾದ್‌, ಚಿಲಿ, ಜೋರ್ಡಾನ್‌, ಲಿಥಾನಿಯಾ, ಮಲೇಷ್ಯಾ, ನ್ಯೂಜಿಲೆಂಡ್‌, ನೈಜೀರಿಯಾ, ಸ್ಪೇನ್‌, ವೆನಿಜುವೆಲಾ ಖಾಯಂ ಅಲ್ಲದ 10 ಸದಸ್ಯ ರಾಷ್ಟ್ರಗಳಾಗಿವೆ. ಖಾಯಂ ಸದಸ್ಯರನ್ನು "ಪಿ5' ಎಂದೂ ಕರೆಯಲಾಗುತ್ತದೆ.

ಭದ್ರತಾ ಮಂಡಳಿ ಸದಸ್ಯತ್ವಕ್ಕೆ ಅಷ್ಟೊಂದು ಮಹತ್ವವೇಕೆ?

ಭಾರತ ಭದ್ರತಾ ಮಂಡಳಿ ಖಾಯಂ ಸದಸ್ಯತ್ವಕ್ಕೆ ಇನ್ನಿಲ್ಲದ ಯತ್ನ ನಡೆಸುತ್ತಿರುವುದನ್ನು ನೋಡಿದರೆ, ಆ ಸದಸ್ಯತ್ವಕ್ಕೆ ಅಷ್ಟೊಂದು ಮಹತ್ವವೇಕೆ ಎಂಬ ಪ್ರಶ್ನೆ ಬರುವುದು ಸಹಜ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯರಿಗೇ ಹೆಚ್ಚು ಅಧಿಕಾರ. ಯಾವುದೇ ಪ್ರಸ್ತಾವನೆಯನ್ನು ತಿರಸ್ಕರಿಸುವ, ಅದನ್ನು ಮಂಡಿಸುವ ಅಧಿಕಾರ ಖಾಯಂ ಸದಸ್ಯರಿಗೆ ಮಾತ್ರ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಶಾಂತಿಯ ಸಮಸ್ಯೆ, ಎರಡು ರಾಷ್ಟ್ರಗಳ ಮಧ್ಯೆ ಸಂಬಂಧದ ಕುರಿತ ಸಮಸ್ಯೆಗಳು ಬಂದಾಗ ಅವುಗಳನ್ನು ಬಗೆಹರಿಸುವ ಮತ್ತು ಯುದ್ಧದ ಪರಿಸ್ಥಿತಿ ಉಂಟಾದರೆ ಅವುಗಳ ಮೇಲೆ ನಿರ್ಬಂಧಗಳನ್ನು ಹೇರುವ ಅವಕಾಶವಿರುವುದು ಖಾಯಂ ಸದಸ್ಯರಿಗೆ ಮಾತ್ರ.

ಮಹತ್ವದ "ವಿಟೋ' ಅಧಿಕಾರ

ಭದ್ರತಾ ಮಂಡಳಿ ಖಾಯಂ ಸದಸ್ಯರಿಗೆ ಮಾತ್ರ ಈ ಅವಕಾಶವಿದೆ. ಇದೊಂದು ಪರಮಾಧಿಕಾರ. ಭದ್ರತಾ ಮಂಡಳಿಯಲ್ಲಿ "ಪ್ರಾಧಾನ್ಯತೆ' ಇಲ್ಲದ, "ಉದ್ದೇಶ ರಹಿತ'ವಾದ, ಮಸೂದೆಗಳ ವಿರುದ್ಧ ಇದನ್ನು ಸದಸ್ಯರಾಷ್ಟ್ರಗಳು ಪ್ರಯೋಗಿಸಬಹುದು. ಇದನ್ನು ಪ್ರಯೋಗಿಸುವುದರ ಹಿಂದೆ ಅಂತಾರಾಷ್ಟ್ರೀಯ ಶಾಂತಿಯ ಹಿತಾಸಕ್ತಿ, ಸೌಹಾರ್ದತೆ ಸ್ಥಾಪನೆಯ ಉದ್ದೇಶವಿದೆ ಎನ್ನಲಾಗಿದೆ. ಆದರೆ ಅದಕ್ಕೆ ಹೊರತಾದ ಕಾರಣಗಳಿಗೇ ಇದನ್ನು ಸದಸ್ಯ ರಾಷ್ಟ್ರಗಳು ಪ್ರಯೋಗಿಸಿದ್ದು ಹೆಚ್ಚು. ತಮ್ಮ ಮೂಗಿನ ನೇರಕ್ಕೆ ಇದನ್ನು ಪ್ರಯೋಗಿಸಿವೆ ಎಂದು ಆರೋಪವಿದೆ. ಅಲ್ಲದೇ ವಿಶ್ವದಲ್ಲಿ ಇಷ್ಟೊಂದು ರಾಷ್ಟ್ರಗಳಿದ್ದು 5 ರಾಷ್ಟ್ರಗಳಿಗೆ ಮಾತ್ರ ಪರಮಾಧಿಕಾರ ಪ್ರಜಾಪ್ರಭುತ್ವ ರೀತ್ಯಾ ಕ್ರಮವಲ್ಲ ಎಂಬ ಟೀಕೆಗಳಿವೆ. ಶೀತಲ ಸಮರ, ಉಗಾಂಡಾ ದಂಗೆ ಸಂದರ್ಭ, ಮೊನ್ನೆಯ ಉಕ್ರೇನ್‌ ಗಲಾಟೆ ಇತ್ಯಾದಿ ಸಂದರ್ಭಗಳಲ್ಲಿ ಸದಸ್ಯರಾಷ್ಟ್ರಗಳು ಉದ್ದೇಶವನ್ನೇ ಮರೆತಿದೆ ಎಂಬ ಆರೋಪವಿದೆ.

ಭದ್ರತಾ ಮಂಡಳಿ ಪುನರ್‌ ರಚನೆಗೆ ಒತ್ತಾಯ

ಇಂದು ವಿಶ್ವದಲ್ಲಿ 190ಕ್ಕೂ ಹೆಚ್ಚು ದೇಶಗಳಿವೆ. ಆದರೆ ಭದ್ರತಾ ಮಂಡಳಿಯಲ್ಲಿ ಕೇವಲ 5 ರಾಷ್ಟ್ರಗಳು ಮಾತ್ರ ಖಾಯಂ ಸದಸ್ಯ ಸ್ಥಾನ ಹೊಂದಿದೆ. ನಿರ್ಧಾರ ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಇದು ಸಮಷ್ಠಿಯನ್ನು ಪ್ರತಿನಿಧಿಸುವುದಿಲ್ಲ ಎಂಬ ಆರೋಪ ಮೊದಲಿಂದಲೂ ಇದೆ. ಇದಕ್ಕಾಗಿ ಭದ್ರತಾ ಮಂಡಳಿ ಖಾಯಂ ಸದಸ್ಯ ಸ್ಥಾನವನ್ನು ಪರಿಷ್ಕರಿಸಬೇಕೆಂಬ ಬೇಡಿಕೆ ಕೇಳಿಬಂದಿತ್ತು. ಈ ಬಗ್ಗೆ ಪ್ರಬಲವಾಗಿ ದನಿ ಮೊಳಗಿಸಿದ್ದು ಭಾರತ, ಜರ್ಮನಿ, ಜಪಾನ್‌ ಮತ್ತು ಬ್ರೆಜಿಲ್‌ ದೇಶಗಳು. 2004ರಲ್ಲಿ ಈ ಬಗ್ಗೆ ವಿಶ್ವಸಂಸ್ಥೆ ಮಹಾಕಾರ್ಯದರ್ಶಿಯಾಗಿದ್ದ ಕೋಫಿ ಅನ್ನಾನ್‌ ಅವರು ತಜ್ಞರ ಸಮಿತಿಯೊಂದರ ಬಳಿ ಪುನರ್‌ ರಚನೆ ಬಗ್ಗೆ ವರದಿ ನೀಡುವಂತೆ ಕೇಳಿಕೊಂಡಿದ್ದರು. ಆಗಿದ್ದ ಪ್ರಸ್ತಾವನೆಯಂತೆ ಭಾರತ, ಜರ್ಮನಿ, ಜಪಾನ್‌, ಬ್ರೆಜಿಲ್‌ಗೆ ಸ್ಥಾನ, ಆಫ್ರಿಕಾ ದೇಶಗಳಲ್ಲೊಂದಕ್ಕೆ ಸ್ಥಾನ ಮತ್ತು ಅರಬ್‌ ದೇಶಗಳಿಂದ ಒಂದು ದೇಶಕ್ಕೆ ಸ್ಥಾನಕೊಡಬೇಕೆಂದಿತ್ತು. ಆದರೆ ಬಳಿಕ ಅದು ಮುಂದುವರಿದಿರಲಿಲ್ಲ. ಕೆಲವು ಬಾರಿ ಅಲ್ಪಮತದಿಂದ ಬಿದ್ದುಹೋಗಿತ್ತು. ಪುನರ್‌ ರಚನೆ ಕುರಿತಂತೆ ಕರಡು ರಚಿಸಿ ಅದನ್ನು ಪಾಸು ಮಾಡುವುದು ಮೊದಲು ಅಗತ್ಯವಾಗಿದೆ. ಇದಕ್ಕಾಗಿ ವಿಶ್ವಸಂಸ್ಥೆಯ ಮೂರನೇ ಎರಡರಷ್ಟು ಮತ ಬೇಕು. ಸದ್ಯ ಪ್ರಸ್ತಾವನೆಗೆ ಸಮ್ಮತಿ ಸಿಕ್ಕಿದ್ದು 128 ದೇಶಗಳು ಪುನರ್‌ ರಚನೆಗೆ ಅಸ್ತು ಎಂದಿವೆ.

ಭಾರತಕ್ಕೆ ಅಡ್ಡಗಾಲು

ಭಾರತ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ಪಡೆಯಲು ಎಷ್ಟು ಶತಾಯಗತಾಯ ಯತ್ನಿಸುತ್ತಿದೆಯೋ, ಹಾಗೆಯೇ ಚೀನಾ, ಪಾಕಿಸ್ತಾನ ಇತ್ಯಾದಿಗಳು ಭಾರತಕ್ಕೆ ಸಿಗಬಾರದು ಎಂದು ಪ್ರಯತ್ನಿಸುತ್ತಿವೆ. ಒಂದು ವೇಳೆ ಭದ್ರತಾ ಮಂಡಳಿಯಲ್ಲಿ ಸ್ಥಾನ ಸಿಕ್ಕರೆ ಆ ದೇಶ ಮಹತ್ವದ ತೀರ್ಮಾನ ಕೈಗೊಳ್ಳುವ ದೇಶಗಳಲ್ಲೊಂದಾಗುತ್ತದೆ. ಇದಕ್ಕೆ ಹಿಂದಿನಿಂದಲೂ ಎಲ್ಲಾ ಖಾಯಂ ಸದಸ್ಯರು ತಿರಸ್ಕಾರ ಹೊಂದಿವೆ. ಹಿಂದೆ ಚೀನಾಕ್ಕೆ ಸದಸ್ಯತ್ವ ಸಿಕ್ಕಲು ಭಾರತವೇ ಬೆಂಬಲ ನೀಡಿದ್ದರೂ, ಭಾರತಕ್ಕೆ ಸದಸ್ಯ ಸ್ಥಾನ ಸಿಕ್ಕರೆ ತನ್ನ ನಿರ್ಧಾರಗಳಿಗೆ ತೊಡಕಾಗಬಹುದು ಎಂಬ ಚಿಂತೆ ಹೊಂದಿದೆ. ಅಮೆರಿಕದ್ದೂ ಇದೇ ಕಥೆ. ರಷ್ಯಾ ಕೂಡ ವಿರುದ್ಧ ದನಿ ಅಷ್ಟೊಂದು ಬಾರಿ ಎತ್ತಿಲ್ಲವಾದರೂ, ಪರವಾಗಿಯಂತೂ ಮಾತೇ ಆಡಿಲ್ಲ! ಭಾರತ ಮಂಡಳಿ ಪುನರ್‌ ರಚನೆ ಪರವಾಗಿರಬೇಕೆಂದು ಎಲ್ಲಾ ದೇಶಗಳನ್ನು ಸಂಪರ್ಕಿಸಿ ಬೇಡಿಕೊಂಡು ಬರುತ್ತಿದ್ದರೆ, ಪಾಕಿಸ್ತಾನ ಸಾಧ್ಯವಾದಷ್ಟೂ ಬೇಡ ಎಂಬಂತಿದೆ. ಅಲ್ಲದೇ ಭಾರತದ ಪ್ರಸ್ತಾವನೆಗಳಿಗೂ ವಿರುದ್ಧ ಮತ ಹಾಕಿದೆ.

 

 

Trending videos

 
ಓದುಗರ ಅಭಿಪ್ರಾಯ
Back to Top