Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಹೊಸ ಮೇಯರ್‌ಗೆ ಸಮಸ್ಯೆಗಳ ಸ್ವಾಗತ

ಅನಿರೀಕ್ಷಿತ ಬೆಳವಣಿಗೆಗಳು ಹಾಗೂ ರಾಜಕೀಯದಾಟಗಳೊಂದಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅರ್ಥಾತ್‌ ಬಿಬಿಎಂಪಿ ಗದ್ದುಗೆ ಹಿಡಿವ ರೇಸ್‌ನಲ್ಲಿ ಕಾಂಗ್ರೆಸ್‌-ಜೆಡಿಎಸ್‌-ಪಕ್ಷೇತರರ ಮಿತ್ರಕೂಟ ಸಫ‌ಲವಾಗಿದೆ. ನಮ್ಮವರೇ ಮೇಯರ್‌ ಆಗುತ್ತಾರೆ ಎಂದು ಕೊನೆವರೆಗೂ ಹೇಳಿಕೊಂಡು ಬಂದ ಬಿಜೆಪಿಗೆ ಮುಖಭಂಗವಾಗಿದ್ದು ಬಿಟ್ಟರೆ, ಮತ್ತೇನೂ ಸಿಕ್ಕಿಲ್ಲ. "ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು' ಎಂಬುದನ್ನು ಚುನಾವಣೆ ಫ‌ಲಿತಾಂಶ ಬಂದಾಗಲೇ ನೆನಪಿಸಿಕೊಂಡಿದ್ದರೆ ಬಹುಶಃ ಆ ಪಕ್ಷ ಇಷ್ಟು ನಿರಾಶೆಗೆ ಒಳಗಾಗಬೇಕಾದ ಪ್ರಮೇಯವಿರುತ್ತಿರಲಿಲ್ಲ.

ಬಿಬಿಎಂಪಿ ಚುನಾವಣೆ ನೆಪದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಒಂದಾಗಿರುವುದನ್ನು ನೋಡಿದರೆ ದೂರದ ಬಿಹಾರ ನೆನಪಾಗುತ್ತದೆ. ಕೆಲವೇ ತಿಂಗಳ ಹಿಂದಿನವರೆಗೂ ಕಚ್ಚಾಡಿಕೊಳ್ಳುತ್ತಿದ್ದ ಜೆಡಿಯುನ ನಿತೀಶ್‌ ಕುಮಾರ್‌ ಹಾಗೂ ಆರ್‌ಜೆಡಿಯ ಲಾಲು ಪ್ರಸಾದ್‌ ಯಾದವ್‌ ಅವರು ಪರಸ್ಪರ ಕೈಜೋಡಿಸಿದಂತೆಯೇ, ಹಾವು-ಮುಂಗುಸಿಯಂತಾಡುತ್ತಿದ್ದ ಕಾಂಗ್ರೆಸ್‌- ಜೆಡಿಎಸ್‌ ಅಧಿಕಾರಕ್ಕಾಗಿ ಒಂದಾಗಿವೆ. ಇದರರ್ಥ ಇನ್ನು ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ನ ದೇವೇಗೌಡರ ಕುಟುಂಬದ ನಡುವೆ ಕದನ ವಿರಾಮವಾಗಿದೆ ಎಂದೇ ಅರ್ಥ. ಈ ಒಪ್ಪಂದ ಬೆಂಗಳೂರಿಗೆ ಸೀಮಿತವೋ ಅಥವಾ ಇನ್ನಿತರೆ ಚುನಾವಣೆಗಳಿಗೂ ವಿಸ್ತರಣೆಯಾಗಲಿದೆಯೋ ಎಂಬುದನ್ನು ಮುಂಬರುವ ದಿನಗಳೇ ಹೇಳಬೇಕು.

ರಾಜ್ಯದ ಉಳಿದೆಲ್ಲಾ ನಗರಗಳಿಗಿಂತ ಬೆಂಗಳೂರು ಜಗದ್ವಿಖ್ಯಾತಿ ಗಳಿಸಿದೆ. ಸಹಸ್ರಾರು ಮಾಹಿತಿ ತಂತ್ರಜ್ಞಾನ ಕಂಪನಿಗಳು, ದೇಶದ ವಿವಿಧ ಭಾಗಗಳ ಅಸಂಖ್ಯ ನೌಕರರು "ಮಿನಿ ಭಾರತ'ದಂತಿರುವ ಈ ನಗರದಲ್ಲಿ ದುಡಿಮೆಗಾಗಿ ಆಶ್ರಯ ಕಂಡುಕೊಂಡಿದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿಯ ನಗರ ಎಂಬ ಹಿರಿಮೆ ಬೆಂಗಳೂರಿನದ್ದಾಗಿದ್ದರೂ ಇಲ್ಲಿನ ಮೂಲ ಸೌಕರ್ಯ ವಿಚಾರದಲ್ಲಿ ಆ ಮಾತುಗಳನ್ನು ಹೇಳುವಂತಿಲ್ಲ. ಕಸದ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ರಸ್ತೆಗಳಿಗೆ ಟಾರು ಹಾಕುವುದು, ಮಳೆ ಬಂದಾಗ ಅದು ಕಿತ್ತು ಹೋಗುವುದು, ಬಳಿಕ ತೇಪೆ ಹಚ್ಚುವುದು, ಯಾವುದೋ ಕಾಮಗಾರಿ ನೆಪದಲ್ಲಿ ರಸ್ತೆ ಅಗೆದು ವ್ಯರ್ಥ ಮಾಡುವುದು ನಿಂತಿಲ್ಲ. ಹೊಸದಾಗಿ ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಪ್ರದೇಶಗಳ ಜನರಿಗೆ ಸೌಲಭ್ಯಗಳು ಸರಿಯಾಗಿ ಸಿಕ್ಕಿಲ್ಲ. ಅದೆಲ್ಲವನ್ನೂ ಸರಿಪಡಿಸುವ ಜನಸ್ನೇಹಿ ಆಡಳಿತ ಬೇಕು ಎಂದು ಬೆಂಗಳೂರಿಗರು ಕೇಳುತ್ತಿದ್ದಾರೆ. ಹೀಗಾಗಿ ನೂತನ ಮೇಯರ್‌ ಮಂಜುನಾಥ ರೆಡ್ಡಿ ಹಾಗೂ ಉಪಮೇಯರ್‌ ಹೇಮಲತಾ ಅವರನ್ನು ಸಮಸ್ಯೆಗಳೇ ಬರಮಾಡಿಕೊಳ್ಳುವಂತಾಗಿದೆ. ರಾಜ್ಯ ಸರ್ಕಾರದ ಸಹಾಯದಿಂದ ಉತ್ತಮ ಆಡಳಿತ ಒದಗಿಸುವ ಹೊಣೆ ಇಬ್ಬರ ಮೇಲೂ ಇದೆ. ಜತೆಗೆ ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ಬಿಬಿಎಂಪಿಗೆ ರಾಜ್ಯ ಸರ್ಕಾರದ ಧಾರಾಳ ಧನಸಹಾಯ ಬೇಕಿದೆ. ಅದು ದುರ್ಬಳಕೆಯಾಗದಂತೆ ನೋಡಿಕೊಳ್ಳುವ ಅಗತ್ಯವೂ ಇದೆ. ಬರಗಾಲದಿಂದಾಗಿ ಕುಡಿವ ನೀರಿನ ಕೊರತೆ ಬೀಳುವ ಅಪಾಯವೂ ಇಣುಕಿ ನೋಡುತ್ತಿದೆ. ಅದಕ್ಕೆ ಈಗಲೇ ಪರ್ಯಾಯ ವ್ಯವಸ್ಥೆಗಳನ್ನೂ ಮಾಡಿಕೊಳ್ಳಬೇಕಿದೆ.

198 ಸದಸ್ಯ ಬಲದ ಬಿಬಿಎಂಪಿಯಲ್ಲಿ ಬಿಜೆಪಿ 101 ಸ್ಥಾನಗಳನ್ನು ಗೆದ್ದಿದೆ. ಇದರರ್ಥ ಬಿಜೆಪಿಗೆ ಸರಳ ಬಹುಮತ ಲಭಿಸಿದೆ ಎಂದು ಮೇಲ್ನೋಟಕ್ಕೆ ಅನ್ನಿಸಬಹುದಾದರೂ, ಕಾಯ್ದೆ ಬೇರೆಯದನ್ನೇ ಹೇಳುತ್ತದೆ. ಬೆಂಗಳೂರಿನ ನಿವಾಸಿಗಳಾಗಿರುವ 60 ಶಾಸಕರು, ವಿಧಾನಪರಿಷತ್‌ ಸದಸ್ಯರು, ಲೋಕಸಭೆ, ರಾಜ್ಯಸಭೆ ಸದಸ್ಯರಿಗೂ ಮತದಾನದ ಅವಕಾಶವಿದೆ. ಆ ಕಾರಣದಿಂದಾಗಿಯೇ, ಒಟ್ಟು ಸ್ಥಾನಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸೀಟು ಪಡೆದಿದ್ದರೂ ಬಿಜೆಪಿ ಅಧಿಕಾರ ವಂಚಿತವಾಗಿದೆ. ಜನಪ್ರತಿನಿಧಿಗಳ ಮತದಾನ ಹಕ್ಕು ಪ್ರಶ್ನಿಸಿ ಬಿಜೆಪಿ ಈಗಾಗಲೇ ಹೈಕೋರ್ಟ್‌ ಮೊರೆ ಹೋಗಿದೆ. ಅದರ ತೀರ್ಪು ಮೇಯರ್‌- ಉಪ ಚುನಾವಣೆಗೆ ಅನ್ವಯವಾಗುತ್ತದೆ ಎಂದು ಕೋರ್ಟ್‌ ಈಗಾಗಲೇ ಸ್ಪಷ್ಟಪಡಿಸಿರುವುದರಿಂದ ಬೆಂಗಳೂರು ನಗರದ ಪ್ರಥಮ ಪ್ರಜೆಗಳಿಗಿಬ್ಬರ ಅಧಿಕಾರದ ಮೇಲೆ ತೂಗುಕತ್ತಿ ನೇತಾಡುವಂತಾಗಿದೆ.

ಬಿಬಿಎಂಪಿಯಲ್ಲಿ ಐದು ವರ್ಷ ಅಧಿಕಾರ ನಡೆಸಿದ್ದ ಬಿಜೆಪಿ ಮತ್ತೂಮ್ಮೆ ಗದ್ದುಗೆ ಹಿಡಿಯಲು ಪ್ರಯತ್ನಿಸಿತು. ಆದರೆ ಕೈಗೆ ಬಂದ ತುತ್ತು ಕೊನೆ ಕ್ಷಣದಲ್ಲಿ ಆ ಪಕ್ಷದ ಬಾಯಿಗೆ ಬರಲಿಲ್ಲ. ಹಾಗಂತ, ಬಿಜೆಪಿ ಹೆಚ್ಚು ನಿರಾಶವಾಗಬೇಕಿಲ್ಲ. ರಾಜಕೀಯದಲ್ಲಿ ಈ ರೀತಿ ಆಗುವುದು ಸಹಜ. ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕೆಲಸ ಮಾಡಿದರೆ ಮತ್ತೆ ಆ ಪಕ್ಷಕ್ಕೆ ಮತ್ತೆ ಅವಕಾಶ ಒದಗಿಬರಬಹುದು. ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷದಷ್ಟೇ ಜವಾಬ್ದಾರಿ ಪ್ರತಿಪಕ್ಷಕ್ಕೂ ಇದೆ ಎಂಬುದನ್ನು ಮರೆಯಬಾರದು.

 

Trending videos

 
ಓದುಗರ ಅಭಿಪ್ರಾಯ
Back to Top