Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಚಿತ್ರರಂಗದ ಸಮಯೋಚಿತ ನಡೆ

ಎರಡು ತಿಂಗಳಿನಿಂದ ಉತ್ತರ ಕರ್ನಾಟಕದಲ್ಲಿ ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಗಾಗಿ ಒತ್ತಾಯಿಸಿ ನಡೆಸುತ್ತಿರುವ ಹೋರಾಟಕ್ಕೆ ಕನ್ನಡ ಚಿತ್ರರಂಗ ಒಕ್ಕೊರಲಿನ ಬೆಂಬಲ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ. ನಾಡು, ನುಡಿ ಹಾಗೂ ಜಲದ ವಿಚಾರದಲ್ಲಿ ಈ ನೆಲದ ಕಳಕಳಿಯ ಜೊತೆ ತಾವಿದ್ದೇವೆ ಎಂದು ಸಿನಿಮಾ ನಟರು ಕೂಗಿ ಹೇಳಿದ್ದು ಜವಾಬ್ದಾರಿಯುತ ನಡೆ ಕೂಡ.

ಬೆಂಗಳೂರಿನಿಂದ ಹುಬ್ಬಳ್ಳಿಗೆ ನೂರಾರು ಸಂಖ್ಯೆಯಲ್ಲಿ ಕನ್ನಡ ಚಿತ್ರರಂಗದ ಗಣ್ಯರೆಲ್ಲ ತೆರಳಿ ಒಗ್ಗಟ್ಟಿನಿಂದ ಹೋರಾಟಗಾರರ ಜತೆ ಕೈಜೋಡಿಸಿ ಸ್ಫೂರ್ತಿ ತುಂಬುವ ಕೆಲಸ ಮಾಡಿದ್ದಾರೆ. ಆ ಮೂಲಕ ತಮ್ಮ ನೆಚ್ಚಿನ ನಟ-ನಟಿಯರು ಸಿನಿಮಾ ಪ್ರಚಾರಕ್ಕೆ ಮಾತ್ರ ಉತ್ತರ ಕರ್ನಾಟಕಕ್ಕೆ ಬರುತ್ತಾರೆಂಬ ಟೀಕೆಯನ್ನೂ ಸುಳ್ಳಾಗಿಸಿದ್ದಾರೆ. ರಾಜಕೀಯ ನಾಯಕರು ತಮ್ಮ ಹೋರಾಟಕ್ಕೆ ಬೆಂಬಲ ನೀಡಲು ಬಂದಾಗ ಸಿಟ್ಟಿನಿಂದ ಪ್ರತಿಭಟಿಸಿದ್ದ ಹೋರಾಟಗಾರರು ಚಿತ್ರರಂಗವನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದು ಕೂಡ ಗಮನಾರ್ಹ.

ರಾಜ್ಯಕ್ಕೆ ರಾಜ್ಯವೇ ಒಂದಾಗಿ ತನ್ನ ಹಕ್ಕಿಗಾಗಿ ಹೋರಾಡುವ ಸಂದರ್ಭ ಬಂದಾಗಲೆಲ್ಲ ಕನ್ನಡ ಚಿತ್ರರಂಗ ಅಂತಹ ಹೋರಾಟಕ್ಕೆ ಸಾಥ್‌ ನೀಡುತ್ತ ಬಂದಿದೆ. 1980ರ ದಶಕದಲ್ಲಿ ನಡೆದ ಗೋಕಾಕ್‌ ಚಳವಳಿ ಯಶಸ್ವಿಯಾಗಿದ್ದೇ ಡಾ| ರಾಜಕುಮಾರ್‌ ಪ್ರವೇಶದ ನಂತರ. ರಾಜ್ಯದಲ್ಲಿ ಕನ್ನಡಕ್ಕೆ ಪ್ರಥಮ ಭಾಷೆಯ ಸ್ಥಾನ ನೀಡಬೇಕೆಂಬ ವಿ.ಕೃ.ಗೋಕಾಕ್‌ ಸಮಿತಿಯ ವರದಿ ಜಾರಿಗಾಗಿ ಆ ಹೋರಾಟ ನಡೆದಿತ್ತು. ಆರಂಭದಲ್ಲಿ ಮಂದಗತಿಯಲ್ಲಿದ್ದ ಹೋರಾಟಕ್ಕೆ ಡಾ| ರಾಜ್‌ ಪ್ರವೇಶದ ನಂತರ ಹೊಸ ಹುರುಪು ಬಂದಿತ್ತು. ಅದರಿಂದಾಗಿ ಚಿತ್ರರಂಗದ ಮೇಲೆ ಜನರಿಗಿದ್ದ ಅಭಿಮಾನವೂ ಹೆಚ್ಚಿತ್ತು.

ನಂತರ ಕಾವೇರಿ ನೀರಿನ ವಿಚಾರದಲ್ಲೂ ಚಿತ್ರರಂಗ ರಾಜ್ಯದ ಒತ್ತಾಸೆಯನ್ನು ಪೊರೆಯುವ ಕೆಲಸ ಮಾಡಿದೆ. ತಮಿಳುನಾಡಿನಲ್ಲಿ ಹೇಗೆ ಅಲ್ಲಿನ ಚಿತ್ರರಂಗ ಕಾವೇರಿ ವಿಚಾರದಲ್ಲಿ ತಮಿಳರಿಗೆ ಸಾಥ್‌ ನೀಡಿತ್ತೋ ಅದಕ್ಕೆ ಯಾವುದೇ ರೀತಿಯಲ್ಲೂ ಕಡಿಮೆಯಿಲ್ಲದಂತೆ ನಮ್ಮ ಚಿತ್ರರಂಗ ಕೂಡ ಕನ್ನಡಿಗರ ಜೊತೆ ನಿಂತಿದೆ.

ಆದರೆ, ಹಳೆ ಮೈಸೂರು ಭಾಗದಲ್ಲಿ ನಡೆಯುವ ಕಾವೇರಿ ಹೋರಾಟಕ್ಕೆ ಹೋಗುವ ಚಿತ್ರನಟರು ಉತ್ತರ ಕರ್ನಾಟಕದ ಕೃಷ್ಣಾ, ಮಹದಾಯಿ ಮುಂತಾದ ಹೋರಾಟಗಳಿಗೆ ಬರುವುದಿಲ್ಲ ಎಂಬ ಕೊರಗು ಅಲ್ಲಿನ ಜನತೆಯಲ್ಲಿತ್ತು. ಈ ನಿಟ್ಟಿನಲ್ಲಿ ಮಹದಾಯಿ ಹೋರಾಟಕ್ಕೆ ಚಿತ್ರರಂಗ ನೀಡಿದ ಅಭೂತ ಬೆಂಬಲ ಒಂದು ಮಹತ್ವದ ಬೆಳವಣಿಗೆ.

ಸಿನಿಮಾ ನಟರು ಒಂದು ದಿನ ಪ್ರತಿಭಟನಾಕಾರರ ಬಳಿಗೆ ತೆರಳಿ ಬೆಂಬಲ ನೀಡಿದಾಕ್ಷಣ ಏನು ಪ್ರಯೋಜನವಾಗುತ್ತದೆ ಎಂದು ಕೇಳುವವರಿದ್ದಾರೆ. ಚಿತ್ರರಂಗದಲ್ಲೇ ಒಂದಿಬ್ಬರು ಈ ಪ್ರಶ್ನೆ ಕೇಳಿದ್ದಾರೆ. ಜನಸಾಮಾನ್ಯರಲ್ಲೂ ಕೆಲವರು ಹೀಗೆ ಕೇಳುವುದುಂಟು. ಇದು ಒಂದರ್ಥದಲ್ಲಿ ಸಿನಿಕತನದ ಟೀಕೆಯಷ್ಟೇ. ಚಿತ್ರರಂಗದ ಬೆಂಬಲದಿಂದ ಹೋರಾಟಕ್ಕೆ ಮತ್ತಷ್ಟು ಶಕ್ತಿ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಯೋಜನೆ ಜಾರಿಗಾಗಿ ಕೇಂದ್ರದ ಮೇಲೆ ಒತ್ತಡ ಹೇರಬೇಕಾದ ರಾಜ್ಯ ಸರ್ಕಾರಕ್ಕೂ ಇದು ಕಠಿಣ ಸಂದೇಶ ರವಾನಿಸುತ್ತದೆ.

ಹುಬ್ಬಳ್ಳಿಗೆ ಬಂದ ಚಿತ್ರರಂಗದವರು ನರಗುಂದಕ್ಕೂ ಬರಬೇಕು ಎಂದು ಕೇಳುತ್ತಿರುವ ಅಲ್ಲಿನ ಪ್ರತಿಭಟನಾಕಾರರು ಇಂತಹ ವಿಷಯಗಳಲ್ಲಿ ಒಗ್ಗಟ್ಟು ಕಾಪಾಡಿಕೊಳ್ಳುವುದಕ್ಕೆ ಹೆಚ್ಚು ಮಹತ್ವ ನೀಡಬೇಕು. ಮುಂದಿನ ದಿನಗಳಲ್ಲಿ ಅಲ್ಲಿಗೂ ಹೋಗುವುದಾಗಿ ಚಿತ್ರರಂಗ ಹೇಳಿದೆ. ಇಂತಹ ಹೋರಾಟದಲ್ಲಿ ಭಿನ್ನ ದನಿಗಳು ಏಳದಂತೆ ನೋಡಿಕೊಳ್ಳುವುದು ಅನಿವಾರ್ಯ. ಇಲ್ಲದಿದ್ದರೆ ಆ ಒಡಕೇ ಹೋರಾಟವನ್ನು ದುರ್ಬಲಗೊಳಿಸುತ್ತದೆ.

ಕಳೆದೊಂದು ವಾರದಿಂದ ಒಬ್ಬಿಬ್ಬರು ಚಿತ್ರನಟರು ಪ್ರತಿದಿನ ಹುಬ್ಬಳ್ಳಿಗೆ ತೆರಳಿ ಮಹದಾಯಿ ಹೋರಾಟದಲ್ಲಿ ಪಾಲ್ಗೊಳ್ಳುತ್ತ ಬಂದಿದ್ದರು. ಹೋರಾಟದ ಕೊನೆಯವರೆಗೂ ಚಿತ್ರರಂಗ ಆ ಮಾದರಿಯಲ್ಲೇ ನಿರಂತರ ಬೆಂಬಲ ನೀಡಬೇಕು. ಆಗಾಗ ಸ್ಟಾರ್‌ ನಟರು ಹೋಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದರಿಂದ ಹೋರಾಟದಲ್ಲಿ ಜನರ ಪಾಲ್ಗೊಳ್ಳುವಿಕೆಯೂ ಹೆಚ್ಚುತ್ತದೆ.

 

Trending videos

 
ಓದುಗರ ಅಭಿಪ್ರಾಯ
Back to Top