Updated at Tue,6th Sep, 2016 12:36PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸಿರಿಯಾದ ಐತಿಹಾಸಿಕ ಸಂಕಷ್ಟ

ಐಸಿಸ್‌ ಉಗ್ರರ ಉಪಟಳ ತಡೆಯಲಾಗದೆ ಸಿರಿಯಾ ಎಂಬ ಪುಟ್ಟ ಏಷ್ಯನ್‌ ರಾಷ್ಟ್ರದ ಜನರು ಸಾಮೂಹಿಕವಾಗಿ ಅಕ್ಕಪಕ್ಕದ ರಾಷ್ಟ್ರಗಳಿಗೆ ವಲಸೆ ಹೊರಟಿರುವುದು 2ನೇ ವಿಶ್ವಯುದ್ಧದ ನಂತರದ ಅತಿದೊಡ್ಡ ಜಾಗತಿಕ ವಲಸೆ ಸಮಸ್ಯೆ ಎಂದು ಬಣ್ಣಿತವಾಗುತ್ತಿದೆ. ಹೆಚ್ಚುಕಮ್ಮಿ ಒಂದಿಡೀ ದೇಶವೇ ಅನ್ಯ ದೇಶಗಳಿಗೆ ವಲಸೆ ಹೋಗುವುದೆಂದರೆ ಸಣ್ಣ ಮಾತಲ್ಲ. ಸಿರಿಯಾದ ವಲಸಿಗರ ಸಂಕಷ್ಟ ಒಂದೆಡೆಯಾದರೆ, ಬಲವಂತವಾಗಿ ಒಳನುಗ್ಗುತ್ತಿರುವ ಅವರಿಗೆ ಆಶ್ರಯ ನೀಡುವುದು ಯುರೋಪಿಯನ್‌ ರಾಷ್ಟ್ರಗಳಿಗೆ ಉಭಯ ಸಂಕಟವಾಗಿ ಪರಿಣಮಿಸಿದೆ. ಮಾನವೀಯ ದೃಷ್ಟಿಯಲ್ಲಿ ಆಶ್ರಯ ನೀಡಬೇಕು ಎಂಬುದೇನೋ ಸರಿ, ಆದರೆ ವಲಸಿಗರ ಆಗಮನದಿಂದ ಉಂಟಾಗುವ ಸಾಮಾಜಿಕ ಹಾಗೂ ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸುವುದು ಹೇಗೆ ಎಂಬುದು ಅವುಗಳ ಸಮಸ್ಯೆ.

ಇಸ್ಲಾಮಿಕ್‌ ರಾಷ್ಟ್ರವಾಗಿರುವ ಸಿರಿಯಾದಲ್ಲಿ ಈ ಸಮಸ್ಯೆ ದಿಢೀರನೆ ಉದ್ಭವಿಸಿದ್ದಲ್ಲ. ಇದರ ಬೇರು ಅರಬ್‌ ಕ್ರಾಂತಿಯೆಂದು ಕರೆಸಿಕೊಂಡು ಸರ್ವಾಧಿಕಾರದಿಂದ ಮುಕ್ತವಾಗಲು ಈಜಿಪ್ಟ್, ಲಿಬಿಯಾ, ಯೆಮನ್‌ ಮುಂತಾದ ರಾಷ್ಟ್ರಗಳಲ್ಲಿ ನಾಲ್ಕೈದು ವರ್ಷಗಳಿಂದೀಚೆಗೆ ನಡೆದ ಅವ್ಯವಸ್ಥಿತ ಹೋರಾಟಗಳಲ್ಲಿದೆ. ಈ ರಾಷ್ಟ್ರಗಳನ್ನು ನೋಡಿ ಸಿರಿಯಾದ ಜನ ಕೂಡ ತಮ್ಮ ಆಡಳಿತದ ವಿರುದ್ಧ ದಂಗೆಯೆದ್ದಿದ್ದರು. ಆದರೆ, ಅದನ್ನು ಕೊನೆಮುಟ್ಟಿಸಲು ಅವರಿಂದ ಸಾಧ್ಯವಾಗಲಿಲ್ಲ. ಆಡಳಿತ ಹಾಗೂ ಜನರ ನಡುವಿನ ಸಂಘರ್ಷದ ಪರಿಸ್ಥಿತಿಯ ಲಾಭ ಪಡೆದ ಐಸಿಸ್‌ ಉಗ್ರರು ತಮ್ಮ ಖಲೀಫಾ ಸಾಮ್ರಾಜ್ಯ ಸ್ಥಾಪನೆಯ ಉದ್ದೇಶ ಈಡೇರಿಸಿಕೊಳ್ಳಲು ಸಿರಿಯಾಕ್ಕೂ ಕಾಲಿಟ್ಟರು. ಅತ್ತ ಈಜಿಪ್ಟ್, ಲಿಬಿಯಾ, ಯೆಮನ್‌ಗಳು ಕೂಡ ಶಾಂತಿಯುತ ಪ್ರಜಾಪ್ರಭುತ್ವವನ್ನು ಕಾಣಲಿಲ್ಲ. ಅಲ್ಲೂ ಉಗ್ರರು ಪ್ರವೇಶಿಸಿದರು. ಇತ್ತ ಸಿರಿಯಾದಲ್ಲಿ ಉಗ್ರರನ್ನು ದಮನ ಮಾಡಲು ದೊರೆಯ ಸರ್ಕಾರ ನಡೆಸತೊಡಗಿದ ದಾಳಿಯಲ್ಲಿ ಜನರು ಸಾಯತೊಡಗಿದರು.

ಈ ಸಂಕಷ್ಟದಿಂದ ಪಾರಾಗಿ ನೆಮ್ಮದಿಯ ನೆಲೆ ಅರಸಿಕೊಳ್ಳಲು ಸಿರಿಯನ್ನರು 2011ರಿಂದಲೇ ಸಣ್ಣ ಪ್ರಮಾಣದಲ್ಲಿ ವಲಸೆ ಹೋಗತೊಡಗಿದ್ದರು. ಈಗ ಸಿರಿಯಾದಲ್ಲಿ ಸರ್ಕಾರ ಹಾಗೂ ಉಗ್ರರ ನಡುವಿನ ಸಂಘರ್ಷ ಹೆಚ್ಚುತ್ತಿದ್ದಂತೆ ಮತ್ತು ಉಗ್ರರು ಸರ್ಕಾರದ ಮೇಲೆ ಸೇಡು ತೀರಿಸಿಕೊಳ್ಳಲು ನಾಗರಿಕರನ್ನು ಹಿಂಸಿಸತೊಡಗಿದಂತೆ ವಲಸೆ ದಿಢೀರ್‌ ಹೆಚ್ಚಿದೆ. ಸಿರಿಯಾದ ಆಡಳಿತ ಕೇಂದ್ರ ಹಾಗೂ ಸುತ್ತಮುತ್ತಲಿನ ಸ್ಥಳಗಳನ್ನು ಬಿಟ್ಟು ಉಳಿದೆಲ್ಲ ಪ್ರದೇಶಗಳೂ ಹೆಚ್ಚುಕಮ್ಮಿ ಐಸಿಸ್‌ ಉಗ್ರರ ಪಾಲಾಗಿವೆ. ಹಾಗಾಗಿ ಜೀವ ಉಳಿಸಿಕೊಳ್ಳಲು ಸಿರಿಯನ್ನರು ಅನಿವಾರ್ಯವಾಗಿ ಅಕ್ಕಪಕ್ಕದ ಯುರೋಪಿಯನ್‌ ರಾಷ್ಟ್ರಗಳ ಗಡಿಯೊಳಗೆ ನುಗ್ಗುತ್ತಿದ್ದಾರೆ. ಮೆಡಿಟರೇನಿಯನ್‌ ಸಮುದ್ರದಲ್ಲಿ ಟರ್ಕಿಗೆ ವಲಸೆ ಹೊರಟಿದ್ದ ಸಿರಿಯನ್‌ ಖುರ್ದಿಷ್‌ ಕುಟುಂಬದ ಅಯಾÉನ್‌ ಎಂಬ ಪುಟ್ಟ ಬಾಲಕನ ಶವ ತೇಲಿಬಂದು ದಂಡೆಯ ಮೇಲೆ ಬಿದ್ದ ಚಿತ್ರ ಜಗತ್ತಿನಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಜಾಗತಿಕ ಮಟ್ಟದಲ್ಲಿ ಸಿರಿಯನ್ನರಿಗೆ ಭಾವನಾತ್ಮಕ ಬೆಂಬಲ ಸಿಗತೊಡಗಿದೆ.

ಮೊದಲು ಸಿರಿಯನ್ನರಿಗೆ ಆಶ್ರಯ ನೀಡಲು ಹಿಂದೇಟು ಹಾಕುತ್ತಿದ್ದ ಯುರೋಪಿಯನ್‌ ರಾಷ್ಟ್ರಗಳು ಈಗ ಜಾಗತಿಕ ಒತ್ತಡ ಹೆಚ್ಚಿದಂತೆ ಹೆಚ್ಚೆಚ್ಚು ನಿರಾಶ್ರಿತರನ್ನು ಸ್ವೀಕರಿಸುತ್ತಿವೆ. ಸಂಕಷ್ಟದ ಸಮಯದಲ್ಲಿ ಮಾನವೀಯ ಹಸ್ತ ಚಾಚುವುದು ಎಲ್ಲ ದೇಶಗಳ ಕರ್ತವ್ಯ. ಆದರೆ ಗಾತ್ರದಲ್ಲಿ ಸಣ್ಣದಾಗಿರುವ ಯುರೋಪಿಯನ್‌ ರಾಷ್ಟ್ರಗಳೊಂದೇ ಎಷ್ಟು ಜನರಿಗೆ ಆಶ್ರಯ ನೀಡಲು ಸಾಧ್ಯ? ಇತ್ತ ಸಿರಿಯಾದ ಏಷ್ಯನ್‌ ಗಡಿಯಲ್ಲಿರುವ ಶ್ರೀಮಂತ ಅರಬ್‌ ರಾಷ್ಟ್ರಗಳು ನಿರಾಶ್ರಿತರ ವಿಷಯದಲ್ಲಿ ಮೌನವಾಗಿಬಿಟ್ಟಿವೆ. ಹಾಗೆ ನೋಡಿದರೆ ಸಿರಿಯಾದ ಜನಸಂಖ್ಯೆಯೇ 1.8 ಕೋಟಿ. ಅದರಲ್ಲಿ ಮುಕ್ಕಾಲು ಪಾಲು ಜನ ದೇಶ ತೊರೆದರೂ ಅವರಿಗೆ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಜಗತ್ತಿನಾದ್ಯಂತ ಆಶ್ರಯ ಕಲ್ಪಿಸುವುದು ಅಸಾಧ್ಯವೇನಲ್ಲ.

ಸಿರಿಯನ್ನರನ್ನು ರಕ್ಷಿಸುವುದರ ಜೊತೆಗೇ ಐಸಿಸ್‌ ಉಗ್ರರ ಮೂಲೋತ್ಪಾಟನೆ ಮಾಡಲು ಜಾಗತಿಕ ಶಕ್ತಿಗಳು ಕೈಜೋಡಿಸುವ ಸಮಯ ಕೂಡ ಬಂದಿದೆ. ದಾಳಿ ನಡೆಸಲು ಫ್ರಾನ್ಸ್‌ ಸಿದ್ಧವಾಗುತ್ತಿರುವುದು ಜಾಗತಿಕ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ.

ಸಿರಿಯಾದ ಜನಸಂಖ್ಯೆ 1.8 ಕೋಟಿ. ಅದರಲ್ಲಿ ಮುಕ್ಕಾಲು ಪಾಲು ಜನ ದೇಶ ತೊರೆದರೂ ಅವರಿಗೆ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಜಗತ್ತಿನಾದ್ಯಂತ ಆಶ್ರಯ ಕಲ್ಪಿಸುವುದು ಅಸಾಧ್ಯವಾಗಬಾರದು. ಈ ವಿಷಯದಲ್ಲಿ ಶ್ರೀಮಂತ ಅರಬ್‌ ರಾಷ್ಟ್ರಗಳ ಅಸಹಕಾರ ಅಮಾನವೀಯ.

 

 

Trending videos

 
ಓದುಗರ ಅಭಿಪ್ರಾಯ
Back to Top