Updated at Tue,6th Sep, 2016 12:36PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಇನ್ನೂ ಬಂದಿಲ್ಲ ರಾಹುಲ್‌ ಕಾಲ

ಕಾಂಗ್ರೆಸ್‌ ಪಕ್ಷದಲ್ಲಿ ಒಂದೂವರೆ ವರ್ಷದಿಂದ ಮುಂದಕ್ಕೆ ಹೋಗುತ್ತಲೇ ಇರುವ "ರಾಹುಲ್‌ ಗಾಂಧಿ ಪದೋನ್ನತಿ ಕಾರ್ಯಕ್ರಮ' ಮತ್ತೆ ಮುಂದಕ್ಕೆ ಹೋಗಿದೆ. ಸೋನಿಯಾ ಗಾಂಧಿಯವರ ಅಧ್ಯಕ್ಷೀಯ ಅವಧಿಯನ್ನು ಒಂದು ವರ್ಷ ಮುಂದುವರೆಸುವ ಪಕ್ಷದ ಕಾರ್ಯಕಾರಿ ಸಮಿತಿಯ ನಿರ್ಧಾರಕ್ಕೆ ರಾಹುಲ್‌ ಗಾಂಧಿ ಅಧ್ಯಕ್ಷರಾಗಲು ಇನ್ನೂ ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂಬುದೇ ಕಾರಣವೆಂದು ಊಹಿಸಲು ವಿಶೇಷ ತರ್ಕವೇನೂ ಬೇಕಿಲ್ಲ. ರಾಹುಲ್‌ ಗಾಂಧಿಯವರ ಆಪ್ತರ ಪ್ರಕಾರ ಕಾಂಗ್ರೆಸ್‌ಗೆ ರಾಹುಲ್‌ರನ್ನು ಅಧ್ಯಕ್ಷರನ್ನಾಗಿ ಮಾಡುವುದು ಈಗಾಗಲೇ ತೀರ್ಮಾನವಾಗಿದೆ, ಪ್ರಶ್ನೆ ಉಳಿದಿರುವುದು ಸಮಯದ್ದು ಮಾತ್ರ.

ಕಳೆದ ಲೋಕಸಭೆ ಚುನಾವಣೆ ಹಾಗೂ ನಂತರ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷಕ್ಕೆ ನಿರಂತರವಾಗಿ ಆಗಿರುವ ಹಿನ್ನಡೆಯಿಂದಾಗಿ ಕಾಂಗ್ರೆಸ್‌ ಪಕ್ಷ ತನ್ನನ್ನು ತಾನು ಮರುರೂಪಿಸಿಕೊಳ್ಳಲು ವಿಶೇಷ ಒತ್ತು ನೀಡಿದೆ. ಅದಕ್ಕೆ ಪಕ್ಷದ ಪರಮೋಚ್ಚ ನಿರ್ಣಾಯಕ ಸಮಿತಿಯಾಗಿರುವ ಕಾರ್ಯಕಾರಿ ಸಮಿತಿಯ ನಿನ್ನೆಯ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ನಿರೀಕ್ಷೆಯಿತ್ತು. ಆದರೆ, ರಾಹುಲ್‌ರನ್ನು ಅಧ್ಯಕ್ಷರನ್ನಾಗಿ ನೇಮಿಸುವುದನ್ನು ಹೊರತುಪಡಿಸಿ ಇತರ ಕೆಲ ನಿರ್ಧಾರಗಳನ್ನಷ್ಟೇ ಕೈಗೊಂಡಿರುವುದರ ಹಿಂದೆ ಶೀಘ್ರದಲ್ಲೇ ಬರುವ ಬಿಹಾರ ಹಾಗೂ ನಂತರದ 6 ತಿಂಗಳೊಳಗೆ ನಡೆಯುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ನೆರಳನ್ನು ಸ್ಪಷ್ಟವಾಗಿ ಗುರುತಿಸಬಹುದು.

ಪಕ್ಷದ ಎಲ್ಲಾ ಆಂತರಿಕ ಚುನಾವಣೆಗಳನ್ನು ಒಂದು ವರ್ಷದ ಕಾಲ ಮುಂದೂಡುವುದು ಹಾಗೂ ಪಕ್ಷದ ಸಾಂಸ್ಥಿಕ ರಚನೆಯಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಅಲ್ಪಸಂಖ್ಯಾತರಿಗೆ ನೀಡಿದ್ದ ಮೀಸಲನ್ನು ಶೇ.20ರಿಂದ ಶೇ.50ಕ್ಕೆ ಹೆಚ್ಚಿಸುವುದು ನಿನ್ನೆಯ ಮಹತ್ವದ ನಿರ್ಧಾರಗಳು. ಅದೇ ವೇಳೆ, ಇಷ್ಟು ವರ್ಷ ರಾಷ್ಟ್ರೀಯ ಅಧ್ಯಕ್ಷರೂ ಸೇರಿದಂತೆ ಪಕ್ಷದ ಎಲ್ಲ ಪದಾಧಿಕಾರಿಗಳಿಗಿದ್ದ ಅವಧಿಯನ್ನು 5 ವರ್ಷದಿಂದ 3 ವರ್ಷಕ್ಕೆ ಇಳಿಸಲಾಗಿದೆ. ಬಿಜೆಪಿಯಂತೆ ಕಾಂಗ್ರೆಸ್‌ನಲ್ಲೂ ಇನ್ನುಮುಂದೆ 3 ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ.

ಕುತೂಹಲವಿರುವುದು ರಾಹುಲ್‌ ಗಾಂಧಿ ಪದೋನ್ನತಿಗೆ ಏಕೆ ಇನ್ನೂ ಕಾಲ ಕೂಡಿಬಂದಿಲ್ಲ ಎಂಬ ಬಗ್ಗೆ. ಒಂದು ವಾದದ ಪ್ರಕಾರ, ಈ ಕೂಡಲೇ ಅಧ್ಯಕ್ಷರಾಗಲು ಅವರೇ ಸಿದ್ಧರಿಲ್ಲ. ಕಾರಣ: ವಿಧಾನಸಭೆ ಚುನಾವಣೆಗಳು. ಈಗಲೇ ಅಧ್ಯಕ್ಷರಾದರೆ ಆರು ತಿಂಗಳೊಳಗೆ ನಡೆಯುವ ಆರು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಅವರಿಗೆ ಸಮಯ ಸಿಗುವುದಿಲ್ಲ. ಆ ಚುನಾವಣೆಗಳಲ್ಲಿ ಹಿನ್ನಡೆಯಾದರೆ ಮತ್ತೆ ಅವರ ಸಾಮರ್ಥ್ಯವನ್ನು ರಾಜಕೀಯ ವಿರೋಧಿಗಳು ಆಡಿಕೊಳ್ಳುತ್ತಾರೆ. ಮೇಲಾಗಿ, ಆರೂ ಚುನಾವಣೆಗಳ ಬಗ್ಗೆ ಕಾಂಗ್ರೆಸ್‌ಗೆ ಅಷ್ಟೇನೂ ಆಶಾಭಾವನೆಯಿಲ್ಲ. ಬಿಹಾರ, ತಮಿಳುನಾಡು, ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಾತ್ರ ಅಷ್ಟಕ್ಕಷ್ಟೆ ಇರಲಿದೆ. ಸದ್ಯ ಅಧಿಕಾರದಲ್ಲಿರುವ ಕೇರಳ,ಅಸ್ಸಾಂನಲ್ಲೂ ಚುನಾವಣೆಯ ಮುನ್ನೋಟಗಳು ಪಕ್ಷದ ಪರವಾಗಿಲ್ಲ.

ಇನ್ನೊಂದು ವಾದದ ಪ್ರಕಾರ, ರಾಹುಲ್‌ ಗಾಂಧಿ ತಮ್ಮದೊಂದು ತಂಡ ಕಟ್ಟುತ್ತಿದ್ದಾರೆ. ಅದರ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಅದು ಮುಗಿದು, ದೇಶಾದ್ಯಂತ ಪಕ್ಷದ ಆಂತರಿಕ ವ್ಯವಹಾರಗಳ ಮೇಲೆ ಹಿಡಿತ ಸಾಧಿಸಿದಾಕ್ಷಣ ಅವರು ಅಧ್ಯಕ್ಷರಾಗುತ್ತಾರೆ.

ವಿಶೇಷವೆಂದರೆ, ನಿನ್ನೆಯ ಸಭೆಯಲ್ಲಿ ಬಿಜೆಪಿ ಆಡಳಿತದ ವಿರುದ್ಧ ವಾಗ್ಧಾಳಿ ನಡೆಸಿದ್ದು ಹಾಗೂ ಪಕ್ಷದಲ್ಲಿ ಆಂತರಿಕ ಮೀಸಲು ಹೆಚ್ಚಿಸಿದ್ದನ್ನು ಬಿಟ್ಟರೆ ಹಳೆಯ ಸೋಲನ್ನು ಮೆಟ್ಟಿ ನಿಲ್ಲುವ ನಿಟ್ಟಿನಲ್ಲಿ ಯಾವುದೇ ಯಾವುದೇ ಪ್ರಬಲ ಉಪಕ್ರಮಗಳ ಸುಳಿವು ಸಿಕ್ಕಿಲ್ಲ. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಸಾಕಷ್ಟು ಬದಲಾವಣೆಯ ತುರ್ತು ಕಾಂಗ್ರೆಸ್‌ಗಿತ್ತು.

ನಿನ್ನೆಯ ಸಭೆಯ ಫ‌ಲಿತಾಂಶವೆಂದರೆ, ಹೆಚ್ಚುಕಮ್ಮಿ ಇನ್ನೂ ಏಳೆಂಟು ತಿಂಗಳು ಕಾಂಗ್ರೆಸ್‌ನ ರಾಷ್ಟ್ರೀಯ ವ್ಯವಹಾರಗಳು ಈಗಿದ್ದಂತೆಯೇ ಇರುತ್ತವೆ. ಪಕ್ಷಕ್ಕೆ ಅದರಿಂದ ಲಾಭವೋ ನಷ್ಟವೋ ಎಂಬುದನ್ನು ವಿಧಾನಸಭೆ ಚುನಾವಣೆಗಳು ಹೇಳಬಹುದು.

 

Trending videos

 
ಓದುಗರ ಅಭಿಪ್ರಾಯ
Back to Top