Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ವಿಧಾನಸಭೆ ವಿಸರ್ಜನೆಗೆ ಶಿಫಾರಸು; ಮಾಂಝಿಗೆ ಜೆಡಿಯುನಿಂದ ಗೇಟ್ ಪಾಸ್

ಪಟ್ನಾ: ಬಿಹಾರ ಮುಖ್ಯಮಂತ್ರಿ ಪದಕ್ಕೆ ರಾಜೀನಾಮೆ ನೀಡುವ ಮುನ್ನ ಜೀತನ್‌ ರಾಮ್‌ ಮಾಂಝಿ ಅವರು ಕೊನೆಗೂ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದ್ದಾರೆ. ವಿಧಾನಸಭೆಯನ್ನು ವಿಸರ್ಜಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡುವ ನಿರ್ಧಾರವನ್ನು ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿದ್ದಾರೆ. ಏತನ್ಮಧ್ಯೆ ಬಂಡಾಯದ ಬಾವುಟ ಹಾರಿಸಿದ ಮಾಂಝಿಯನ್ನು ಜೆಡಿಯು ಪಕ್ಷದಿಂದ ವಜಾ ಮಾಡಿದೆ.

ಮಧ್ಯಾಹ್ನ ದಿಢೀರನೆ ಏರ್ಪಡಿಸಲಾಗಿದ್ದ ಸಚಿವ ಸಂಪುಟ ಸಭೆಯಲ್ಲಿ ಮಾಂಝಿ ಅವರು, ಮೂರನೇ ಎರಡಂಶ ಸಚಿವರ, ಎಂದರೆ 29 ಮಂದಿ ಸಚಿವರಲ್ಲಿ 22 ಮಂದಿ ಸಚಿವರ, ವಿರೋಧ ಇರುವ ಹೊರತಾಗಿಯೂ, ರಾಜ್ಯ ವಿಧಾನಸಭೆಯನ್ನು ವಿಸರ್ಜಿಸುವ ಶಿಫಾರಸನ್ನು ಮಾಡುವ ನಿರ್ಧಾರ ಕೈಗೊಂಡರು.

ಈ ಒಟ್ಟು ಬೆಳವಣಿಗೆಯ ಹಿನ್ನೆಲೆಯಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ತಮ್ಮ ಬೆಂಬಲಿಗ ಸಚಿವರೊಂದಿಗೆ ಈಗಿನ್ನು ರಾಜ್ಯಪಾಲರನ್ನು ಕಾಣಲು ಹೋಗಲಿದ್ದಾರೆ.

ಈ ನಡುವೆ ಮಾಂಝಿ ಅವರು ನಿತೀಶ್‌ ಕುಮಾರ್‌ ಅವರನ್ನು ಅವರ ನಿವಾಸದಲ್ಲೇ ಭೇಟಿಯಾಗಲಿರುವುದಾಗಿ ತಿಳಿದು ಬಂದಿದೆ. ಮಾಂಝಿ ಮತ್ತು ನಿತೀಶ್‌ ಕುಮಾರ್‌ ನಡುವಿನ ಬಿರುಕನ್ನು ಸರಿಪಡಿಸುವ ಯತ್ನಗಳು ಜಾರಿಯಲ್ಲಿವೆ ಎಂದೂ ಕೆಲವು ಮೂಲಗಳು ಹೇಳಿದ್ದು ಮಾಂಝಿ ಅವರ ರಾಜೀನಾಮೆಯನ್ನು ಅನುಸರಿಸಿ ನಿತೀಶ್‌ ಅವರೇ ರಾಜ್ಯದ ಮುಖ್ಯಮಂತ್ರಿ ಗಾದಿಯನ್ನು ಏರಲಿದ್ದಾರೆ ಎಂದು ತಿಳಿದುಬಂದಿದೆ.

ಇಬ್ಬರು ಸಚಿವರ ವಜಾ: ರಾಜ್ಯಪಾಲರಿಂದ ಮಾಂಝಿ ಶಿಫಾರಸಿಗೆ ಪುರಸ್ಕಾರ 

ಈ ನಡುವೆ ತನ್ನ ಸಚಿವ ಸಂಪುಟದ ಇಬ್ಬರು ಸದಸ್ಯರಾದ ರಾಜೀವ್‌ ರಂಜನ್‌ ಸಿಂಗ್‌ ಲಲ್ಲನ್‌ (ರಸ್ತೆ ನಿರ್ಮಾಣ ಖಾತೆ ಸಚಿವ) ಮತ್ತು P K ಶಾಹಿ (ಅರಣ್ಯ ಸಚಿವ) ಅವರನ್ನು ಸಚಿವ ಖಾತೆಯಿಂದ ವಜಾ ಮಾಡುವಂತೆ ಮುಖ್ಯಮಂತ್ರಿ ಮಾಂಝಿ ಅವರು ಮಾಡಿರುವ ಶಿಫಾರಸನ್ನು ರಾಜ್ಯಪಾಲ ಕೇಸರಿ ನಾಥ ತ್ರಿಪಾಠಿ ಅವರು ಸ್ವೀಕರಿಸಿರುವುದಾಗಿ ತಿಳಿದುಬಂದಿದೆ. 

ಈ ಇಬ್ಬರು ಸಚಿವರು ಈ ತನಕ ಮಾಂಝಿಗೆ ನಿಷ್ಠರಾಗಿದ್ದರು. ಆದರೆ ಮಾಂಝಿ ಅವರನ್ನು ಮುಖ್ಯಮಂತ್ರಿ ಪದದಿಂದ ಕಿತ್ತು ಹಾಕುವ ಅಭಿಯಾನದಲ್ಲಿ ಇವರು ಮುಂಚೂಣಿಯಲ್ಲಿದ್ದು ಮಾಜಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ನಿಕಟರಾಗಿದ್ದರು. 

ಇಬ್ಬರು ಸಚಿವರನ್ನು ವಜಾ ಮಾಡಬೇಕೆಂಬ ಮಾಂಝಿ ಶಿಫಾರಸನ್ನು ಪರಿಗಣಿಸದಿರುವಂತೆ ಜೆಡಿಯು ಅಧ್ಯಕ್ಷ ಶರದ್‌ ಯಾದವ್‌ ಅವರು ಮಾಡಿಕೊಂಡಿದ್ದ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸುವುದು ಗಮನಾರ್ಹ ವಿದ್ಯಮಾನವೆಂದು ತಿಳಿಯಲಾಗಿದೆ. 

ಮಾಂಝಿಗೆ  ಅತ್ಯಲ್ಪ ಬೆಂಬಲ: ನಿತೀಶ್‌ 

ಮಾಂಝಿಗೆ ಪಕ್ಷದಲ್ಲಿರುವ ಬೆಂಬಲವು ಅತ್ಯಲ್ಪವೆಂದು ನಿತೀಶ್‌ ಕುಮಾರ್‌ ಹೇಳಿರುವ ಬೆನ್ನಲ್ಲೇ, ರಾಜ್ಯ ವಿಧಾನಸಭೆಯಲ್ಲಿ 115 ಜೆಡಿಯು ಶಾಸಕರ ಪೈಕಿ 104 ಮಂದಿ ಶಾಸಕರು ಲಿಖೀತವಾಗಿ ನಿತೀಶ್‌ಗೆ ತಮ್ಮ ಬೆಂಬಲವಿದೆ ಎಂದು ಹೇಳಿದ್ದಾರೆ.

ಮಾಂಝಿ ಅವರನ್ನು 2014ರ ಮೇ 17ರಂದು ಬಿಹಾರದ ಮುಖ್ಯಮಂತ್ರಿಯಾಗಿ ಹೆಸರಿಸಲಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಜೆಡಿಯು ತೋರಿದ ಅತ್ಯಂತ ಕಳಪೆ ನಿರ್ವಹಣೆಗೆ ಹೊಣೆಹೊತ್ತು ನಿತೀಶ್‌ ಅವರು ಮುಖ್ಯಮಂತ್ರಿ ಪದಕ್ಕೆ ರಾಜೀನಾಮೆ ನೀಡಿದ್ದರು. ಬಿಹಾರದ 40 ಲೋಕಸಭಾ ಸ್ಥಾನಗಳಲ್ಲಿ ಜೆಡಿಯು ಕೇವಲ ಎರಡು ಸ್ಥಾನಗಳನ್ನು ಮಾತ್ರವೇ ಗೆದ್ದಿತ್ತು.

 

Trending videos

 
ಓದುಗರ ಅಭಿಪ್ರಾಯ
Back to Top